ಡಿಸಿ ನೂತನ ಕಟ್ಟಡಕ್ಕೆ ಅನುದಾನ ಕಷ್ಟ

dc office new
Published on

ಹರೀಶ್ ಮೋಟುಕಾನ, ಮಂಗಳೂರು

ಪಡೀಲ್ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಜಿಲ್ಲಾಧಿಕಾರಿ ನೂತನ ಕಚೇರಿ ಸಂಕೀರ್ಣ ನಿರ್ಮಾಣ ಕಾಮಗಾರಿ ಪ್ರಸ್ತುತ ಶೇ.75ರಷ್ಟು ಪೂರ್ಣಗೊಂಡರೂ, ಸರ್ಕಾರದಿಂದ ಬರಬೇಕಾದ 24 ಕೋಟಿ ರೂ.ಬಿಡುಗಡೆಯಾಗದೆ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ.

ಪರಿಸರವಾದಿಗಳಿಂದ ಭಾರಿ ವಿರೋಧದ ನಡುವೆ, ನ್ಯಾಯಾಲಯದ ಅನುಮತಿಯೊಂದಿಗೆ ಕಾಮಗಾರಿ ಆರಂಭಗೊಂಡಿತ್ತು. 2018ರ ಮಾರ್ಚ್‌ನಲ್ಲಿ ಮೊದಲ ಹಂತದ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಕರ್ನಾಟಕ ಗೃಹ ಮಂಡಳಿ ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿದೆ. ಗುತ್ತಿಗೆ ನಿಯಮಾವಳಿ ಪ್ರಕಾರ ಮೊದಲ ಹಂತದ ಕಾಮಗಾರಿ 2019ರ ಸೆ.16ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ ಅನುದಾನ ವಿಳಂಬ ಕಾರಣಕ್ಕೆ ಕಾಮಗಾರಿ ಆಮೆ ಗತಿಯಲ್ಲಿ ಸಾಗಿದ್ದು, 2020 ಜುಲೈ ಅಂತ್ಯದೊಳಗೆ ಮುಗಿಸಲು ಗಡುವು ನೀಡಲಾಗಿದೆ.

ಒಟ್ಟು 41 ಕೋಟಿ ರೂ.ಟೆಂಡರ್ ಮೊತ್ತದಲ್ಲಿ ಪ್ರಸ್ತುತ 33 ಕೋಟಿ ರೂ. ಕಾಮಗಾರಿ ನಡೆದಿದೆ. ಆದರೆ ಸರ್ಕಾರದಿಂದ ಬಿಡುಗಡೆಯಾಗಿರುವುದು 17 ಕೋಟಿ ರೂ.ಮಾತ್ರ. ಉಳಿದ 24 ಕೋಟಿ ರೂ. ಬಿಡುಗಡೆ ಮಾಡಲು ಸರ್ಕಾರ ಇನ್ನೂ ಮುಂದಾಗಿಲ್ಲ. ಗೃಹ ಮಂಡಳಿ ಮನವಿ ಮೇರೆಗೆ ಗುತ್ತಿಗೆ ವಹಿಸಿಕೊಂಡಿರುವವರ ಸಂಸ್ಥೆಯವರು ಕೆಲಸ ನಿರ್ವಹಿಸುತ್ತಿದ್ದಾರೆ. ಕಾಮಗಾರಿ ಮುಂದುವರಿದಿದೆ.

ಕಟ್ಟಡ ವಿನ್ಯಾಸ ಪೂರ್ಣ

ತಳ ಅಂತಸ್ತು, ನೆಲ ಅಂತಸ್ತು, ಮೂರು ಮಹಡಿಗಳು ಮತ್ತು ಛಾವಣಿ ಮಾದರಿಯಲ್ಲಿ ಕಟ್ಟಡ ನಿರ್ಮಾಣವಾಗಲಿವೆ. ಕಟ್ಟಡದ ವಿನ್ಯಾಸ ಪೂರ್ಣಗೊಂಡಿದ್ದು, ಛಾವಣಿಯ ಕೆಲಸಗಳು ನಡೆಯುತ್ತದೆ. ತಳ ಮತ್ತು ನೆಲ ಅಂತಸ್ತಿನ ವಯರಿಂಗ್, ಸಾರಣೆ ಕೆಲಸಗಳು ಮುಗಿದಿವೆ. ಮೊದಲ ಮತ್ತು ಎರಡನೇ ಮಹಡಿಯಲ್ಲಿ ಗೋಡೆಗಳಿಗೆ ಕಲ್ಲು ಕಟ್ಟುವ ಕೆಲಸಗಳು ಮತ್ತು ವೈರಿಂಗ್ ಕೆಲಸಗಳು ಪೂರ್ಣಗೊಂಡಿವೆ. ಆವರಣ ಗೋಡೆ, ಡ್ರೈನೇಜ್, ವಿದ್ಯುತ್ ಸಂಪರ್ಕ, ಸೇಫ್ಟಿ, ಇಂಟೀರಿಯರ್ ವರ್ಕ್‌ಗಳು ಇನ್ನಷ್ಟೇ ನಡೆಯಬೇಕಿದೆ.

ಕಟ್ಟಡದ ಒಟ್ಟು ವಿಸ್ತೀರ್ಣ

ಕಟ್ಟಡ ಒಟ್ಟು ವಿಸ್ತೀರ್ಣ 20959.73 ಚದರ ಮೀ, ತಳ ಅಂತಸ್ತು 4043.88 ಚ.ಮೀ, ನೆಲ ಅಂತಸ್ತು 7553.36 ಚ.ಮೀ, ಮೊದಲ ಮಹಡಿ 4158.28 ಚ.ಮೀ, 2ನೇ ಮಹಡಿ 2561.28 ಚ.ಮೀ, 3ನೇ ಮಹಡಿ 2561.28 ಚ.ಮೀ, ರೂಫ್‌ಟಾಪ್ 80.89 ಚ.ಮೀ. ಕಚೇರಿ ವ್ಯಾಪ್ತಿ 9655.15 ಚ.ಮೀ, ಕಾಮನ್‌ಏರಿಯ/ಕಾರಿಡಾರ್ 4894 ಚ.ಮೀ, ಕಾರ್ ಪಾರ್ಕಿಂಗ್ 2413.33 ಚ.ಮೀ, ಮೀಟಿಂಗ್ ಹಾಲ್ 692.55 ಚ.ಮೀ, ಆಡಿಟೋರಿಯಂ 743.33 ಚ.ಮೀ..

ಬೃಹತ್ ಸಭಾಂಗಣ, ಮೀಟಿಂಗ್ ಹಾಲ್ ನೆಲ ಅಂತಸ್ತಿನಲ್ಲಿ 400 ಜನರು ಕುಳಿತುಕೊಳ್ಳಬಹುದಾದ ಬೃಹತ್ ಸಭಾಂಗಣ. 2ನೇ ಮಹಡಿಯಲ್ಲಿ 2 ಮೀಟಿಂಗ್ ಹಾಲ್, ತಳ ಅಂತಸ್ತು ಕಾರು ಮತ್ತು ದ್ವಿಚಕ್ರವಾಹನ ಪಾರ್ಕಿಂಗ್‌ಗೆ ಮೀಸಲು. 50 ಕಾರು ಮತ್ತು 100ಕ್ಕೂ ಅಧಿಕ ದ್ವಿಚಕ್ರ ವಾಹನ ನಿಲ್ಲಿಸಲು ಅವಕಾಶವಿದೆ. ಕಟ್ಟಡದ ಸುತ್ತಲೂ 70 ಕಾರುಗಳನ್ನು ನಿಲ್ಲಿಸಬಹುದು. ಕಟ್ಟಡದ ಒಳಭಾಗದಲ್ಲಿ ಎರಡು ತೆರೆದ ಪ್ರದೇಶವಿದ್ದು, ಇದು ಕಟ್ಟಡಕ್ಕೆ ಹೆಚ್ಚು ಬೆಳಕು ನೀಡುತ್ತದೆ. ಸಂಕೀರ್ಣದಲ್ಲಿ ಬ್ಯಾಂಕ್, ಎಟಿಎಂ, ಕ್ಯಾಂಟೀನ್, ಅಂಚೆ ಕಚೇರಿ, ಪೊಲೀಸ್ ಹೊರ ಠಾಣೆ ಇರಲಿದೆ.

ದ.ಕ.ಜಿಲ್ಲಾಧಿಕಾರಿ ನೂತನ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಸರ್ಕಾರದಿಂದ 24 ಕೋಟಿ ರೂ. ಅನುದಾನ ಬಿಡುಗಡೆಗೆ ಬಾಕಿ ಇದೆ. ಆದರೂ ಗುತ್ತಿಗೆ ವಹಿಸಿಕೊಂಡವರು ಕಾಮಗಾರಿ ಮುಂದುವರಿಸಿದ್ದಾರೆ. ಜುಲೈ ಅಂತ್ಯದೊಳಗೆ ಕಾಮಗಾರಿ ಮುಗಿಸಲು ಸೂಚನೆ ನೀಡಲಾಗಿದೆ. ಅನುದಾನ ಬೇಗ ಬಿಡುಗಡೆಗೊಂಡಷ್ಟು ವೇಗದಲ್ಲಿ ಕಾಮಗಾರಿಯೂ ಪೂರ್ಣಗೊಳ್ಳುತ್ತದೆ. ವಿಜಯ ಕುಮಾರ್ ಎಇಇ, ಕರ್ನಾಟಕ ಗೃಹ ಮಂಡಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net