ಡಿಸಿ ಕಚೇರಿ ಆಧಾರ್ ಕೇಂದ್ರ ಬಂದ್

Adhar
Published on

ಕೇಶವಮೂರ್ತಿ ವಿ.ಬಿ. ಹಾವೇರಿ
ಜಿಲ್ಲೆಯ ಎಂಟೂ ತಾಲೂಕುಗಳ ಸೇವಾ ಕೇಂದ್ರಗಳಲ್ಲಿ ಬಗೆಹರಿಯದ ಆಧಾರ್‌ನ ಕ್ಲಿಷ್ಟಕರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದ ಇಲ್ಲಿನ ದೇವಗಿರಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಆಧಾರ್ ಕೇಂದ್ರ ಒಂದು ತಿಂಗಳಿಂದ ಸ್ಥಗಿತಗೊಂಡಿದೆ.

ಮಿಸ್ ಬಯೋಮೆಟ್ರಿಕ್ ಕೇಸ್‌ನಲ್ಲಿ ಐಡಿ ಬಂದ್ ಮಾಡಲಾಗಿದ್ದು, ಆಪರೇಟರ್ ಗುರು ಪ್ರಕಾಶನನ್ನು ಅಮಾನತುಗೊಳಿಸಲಾಗಿದೆ. ಆಪರೇಟರ್ ಮಾಡಿದ ತಪ್ಪಿಗೆ ಜನರಿಗೆ ಶಿಕ್ಷೆ ನೀಡಿದಂತಾಗಿದೆ.

ಕುಷ್ಠ ರೋಗಿಯೊಬ್ಬರ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವಾಗ ಬಯೋಮೆಟ್ರಿಕ್ ಮಿಸ್ ಮ್ಯಾಚ್ ಮಾಡಿರುವ ಆರೋಪದಡಿ ಆಪರೇಟರ್ ಗುರು ಪ್ರಕಾಶನನ್ನು ಒಂದು ವರ್ಷದವರೆಗೆ ಆಧಾರ್ ಸಂಸ್ಥೆ ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು. ಇದಾಗಿ ಒಂದು ತಿಂಗಳು ಕಳೆದರೂ ಈವರೆಗೆ ಕೇಂದ್ರಕ್ಕೆ ಆಪರೇಟರ್ ನೇಮಕವಾಗಿಲ್ಲ. ಹಾಗಾಗಿ, ಕೇಂದ್ರದ ಬಾಗಿಲು ಮುಚ್ಚಲಾಗಿದೆ. ಇದರಿಂದ ಜನ ಹೈರಾಣಾಗಿದ್ದಾರೆ.

ಪ್ರತಿದಿನ ಇಲ್ಲಿ 30ಕ್ಕೂ ಅಧಿಕ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿತ್ತು. ಪ್ರತಿ ತಿಂಗಳು 400ಕ್ಕೂ ಅಧಿಕ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದವು. ಹೊಸ ನೋಂದಣಿ, ತಿದ್ದುಪಡಿ ಪ್ರಕರಣಗಳು ಇಲ್ಲಿ ಕಡಿಮೆ. ತಾಲೂಕು ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿದ್ದರೂ ಆಗದಿರುವ, ಕುಷ್ಟ ರೋಗ, ಅಂಧರು, ಇತರರ ಆಧಾರ್ ಕಾರ್ಡ್ ಸಮಸ್ಯೆಗಳಿದ್ದಲ್ಲಿ ಡಿಸಿ ಕಚೇರಿ ಕೇಂದ್ರಕ್ಕೆ ಬರುತ್ತಿದ್ದರು.

70, 80 ಕಿ.ಮೀ. ದೂರದ ಹಳ್ಳಿಗಳಿಂದಲೂ ಜನ ಹಣ ಖರ್ಚು ಮಾಡಿಕೊಂಡು ಕಚೇರಿಗೆ ಬಂದು ಹೋಗುತ್ತಿದ್ದಾರೆ. ಇಲ್ಲಿನ ಆಧಾರ್ ಕೇಂದ್ರ ಬಂದ್ ಆಗಿರುವುದನ್ನು ನೋಡಿ ವಾಪಸಾಗುತ್ತಿದ್ದಾರೆ. ಪಕ್ಕದ ಹುಬ್ಬಳ್ಳಿ, ದಾವಣಗೆರೆಯ ಆಧಾರ್ ಕೇಂದ್ರಗಳಿಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಕೇಂದ್ರಕ್ಕೆ ಹೊಸ ಆಪರೇಟರ್ ನೇಮಿಸಬೇಕು. ಜನರ ಆಧಾರ್ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಎಂಟು ವರ್ಷಗಳಿಂದ ಕೆಲಸ

ಆಪರೇಟರ್ ಗುರು ಪ್ರಕಾಶ ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಸದ್ಯ ಈತನ ಮೇಲಿನ ಆರೋಪದ ಕುರಿತು ತನಿಖೆ ನಡೆಯುತ್ತಿದೆ. ಆರೋಪ ಸಾಬೀತಾದರೆ ಈತನನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ನಗರದಲ್ಲಿ ಆರಂಭಿಸಿ

ಜಿಲ್ಲಾಧಿಕಾರಿ ಕಚೇರಿ ಹಾವೇರಿ ನಗರದಿಂದ 8 ಕಿಮೀ ದೂರದ ದೇವಗಿರಿಯಲ್ಲಿದೆ. ರಟ್ಟಿಹಳ್ಳಿ, ಹಿರೇಕೆರೂರ, ರಾಣೆಬೆನ್ನೂರ ಮತ್ತಿತರ ತಾಲೂಕುಗಳಿಂದ ಹಾವೇರಿಗೆ ಬಂದು, ಅಲ್ಲಿಂದ ದೇವಗಿರಿಗೆ ಬರುವುದು ಕಷ್ಟವಾಗುತ್ತಿದೆ. ಬಂದರೂ ಒಂದೇ ದಿನದಲ್ಲಿ ಕೆಲಸ ಆಗುತ್ತಿಲ್ಲ. ಹಾಗಾಗಿ, ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಬಸ್ ನಿಲ್ದಾಣದ ಸಮೀಪದಲ್ಲಿ ಜಿಲ್ಲಾ ಆಧಾರ್ ಕೇಂದ್ರ ಆರಂಭಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಹೊಸ ಆಪರೇಟರ್ ನೇಮಿಸುವ ಕುರಿತು ಸೆಂಟರ್ ಫಾರ್ ಇ- ಗವರ್ನನ್ಸ್‌ಗೆ ಪತ್ರ ಬರೆದಿದ್ದೇವೆ. ಅವರು ಬೆಂಗಳೂರಿನ ಆಧಾರ್ ಕಚೇರಿಗೆ ಬರೆದಿದ್ದಾರೆ. ಹೊಸ ಆಪರೇಟರ್ ನೇಮಕಗೊಂಡ ಕೂಡಲೇ ಆಧಾರ್ ಕೇಂದ್ರ ಕಾರ್ಯಾರಂಭಿಸಲಿದೆ.ವೀರೇಶ ಬಿ, ಆಧಾರ್ ಜಿಲ್ಲಾ ಸಂಯೋಜಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net