

ಹರೀಶ್ ಮೋಟುಕಾನ ಮಂಗಳೂರು
ನಗರದ ಪಡೀಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಜಿಲ್ಲಾಧಿಕಾರಿ ಕಟ್ಟಡ ಕಾಮಗಾರಿಗೆ ಅನುದಾನದ ಕೊರತೆ ಎದುರಾಗಿದೆ. ಶೇ.60ರಷ್ಟು ಪೂರ್ಣಗೊಂಡಿರುವ ಕಾಮಗಾರಿ ಸದ್ಯ ನಿಧಾನಗತಿಯಲ್ಲಿದೆ.
ಕಾಮಗಾರಿ ಮುಂದುವರಿಸಲು ವಿವಿಧ ಇಲಾಖೆಗಳಿಂದ ಅನುದಾನ ನಿರೀಕ್ಷಿಸಲಾಗುತ್ತಿದೆ. 41 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆರಂಭಿಸಲಾದ ಸಂಕೀರ್ಣಕ್ಕೆ ಇದುವರೆಗೆ 50 ಕೋಟಿ ರೂ. ವೆಚ್ಚವಾಗಿದೆ. ಇನ್ನುಳಿದ ಕಾಮಗಾರಿಗೆ 20 ಕೋಟಿ ರೂ. ಅವಶ್ಯವಿದೆ. ಈ ಪೈಕಿ ಆರೋಗ್ಯ ಇಲಾಖೆ 7 ಕೋಟಿ ರೂ. ಸಹಿತ ವಿವಿಧ ಇಲಾಖೆಗಳು ಅಂದಾಜು 11 ಕೋಟಿ ರೂ. ನೀಡಬೇಕಿದೆ. ಬಾಕಿ ಉಳಿಕೆ ಮೊತ್ತವನ್ನು ಸರ್ಕಾರವೇ ಸರಿದೂಗಿಸಬೇಕು. ಆದರೆ ಇಲಾಖೆ, ಸರ್ಕಾರದಿಂದ ಈ ಅನುದಾನ ಬಿಡುಗಡೆಯಾಗದ ಕಾರಣ ಕಾಮಗಾರಿ ಮುಂದುವರಿಕೆಗೆ ಸಮಸ್ಯೆಯಾಗಿದೆ.
2018ರ ಮಾರ್ಚ್‌ನಲ್ಲಿ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ಗುತ್ತಿಗೆ ನಿಯಮಾವಳಿ ಪ್ರಕಾರ ಮೊದಲ ಹಂತದ ಕಾಮಗಾರಿ 2019ರ ಸೆ.16ಕ್ಕೆ ಪೂರ್ಣಗೊಳ್ಳಬೇಕಿತ್ತು. ಸದ್ಯದ ಮಾಹಿತಿ ಪ್ರಕಾರ ಸಿವಿಲ್ ಕಾಮಗಾರಿ ಇನ್ನೊಂದು ತಿಂಗಳಲ್ಲಿ ಪೂರ್ಣವಾದರೂ, ವಿದ್ಯುತ್ ಸಹಿತ ಒಳಾಂಗಣ ವಿನ್ಯಾಸದ ಕೆಲಸ ಪೂರ್ಣವಾಗಲು ಇನ್ನೂ 5-6 ತಿಂಗಳು ಬೇಕಾಗಬಹುದು.
ಬೃಹತ್ ಸಭಾಂಗಣ: ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಒಟ್ಟು 5.8 ಎಕರೆ ಪ್ರದೇಶದಲ್ಲಿ 2.26 ಲಕ್ಷ ಚದರ ಅಡಿ ವಿಸ್ತೀರ್ಣ ಇರಲಿದೆ. 38 ಇಲಾಖೆಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರ ಕಚೇರಿ ಇಲ್ಲಿರಲಿದೆ. ನೆಲ ಅಂತಸ್ತಿನಲ್ಲಿ 400 ಜನ ಕುಳಿತುಕೊಳ್ಳಬಹುದಾದ ಬೃಹತ್ ಸಭಾಂಗಣ, 2ನೇ ಮಹಡಿಯಲ್ಲಿ ಎರಡು ಮೀಟಿಂಗ್ ಹಾಲ್, ತಳ ಅಂತಸ್ತು ಕಾರು ಮತ್ತು ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ಮೀಸಲಿಡಲಾಗುತ್ತದೆ. 50 ಕಾರು ಮತ್ತು 100ಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಅವಕಾಶವಿದೆ. ಕಟ್ಟಡದ ಸುತ್ತ ಸುಮಾರು 70 ಕಾರು ನಿಲ್ಲಿಸಬಹುದು. ಸಂಕೀರ್ಣದಲ್ಲಿ ಬ್ಯಾಂಕ್, ಎಟಿಎಂ, ಕ್ಯಾಂಟೀನ್, ಅಂಚೆ ಕಚೇರಿ, ಪೊಲೀಸ್ ಹೊರ ಠಾಣೆ ನಿರ್ಮಾಣವಾಗಲಿದೆ.
ಮತ ಯಂತ್ರಗಳಿಗೆ ಪ್ರತ್ಯೇಕ ಗೋದಾಮು: ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಹಿಂಭಾಗ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತಯಂತ್ರದ ವಿವಿಧ ವಿಭಾಗಗಳಾದ ಇವಿಎಂ, ವಿವಿಪ್ಯಾಟ್ ಮತ್ತು ಕಂಟ್ರೋಲ್ ಯೂನಿಟ್‌ಗಳನ್ನು ಸಂಗ್ರಹಿಸಿಡಲು ಗೋದಾಮು ನಿರ್ಮಾಣವಾಗುತ್ತಿದೆ. ಸ್ಟೇಟ್‌ಬ್ಯಾಂಕ್ ಬಳಿಯ ಈಗಿನ ಡಿಸಿ ಕಚೇರಿ ಸಂಕೀರ್ಣದಲ್ಲಿರುವ ಸ್ಟ್ರಾಂಗ್‌ರೂಮ್‌ನಲ್ಲಿ ಪ್ರಸ್ತುತ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮತಯಂತ್ರಗಳನ್ನು ಇರಿಸಲಾಗಿದೆ. ಅನಂತರ ಇದನ್ನು ಪಡೀಲ್‌ಗೆ ಸ್ಥಳಾಂತರಿಸಲಾಗುತ್ತದೆ. ತಳ ಅಂತಸ್ತು ಮತ್ತು ಎರಡು ಮಹಡಿ ಹೊಂದಿರುವ ಕಟ್ಟಡವಿದಾಗಿದ್ದು ಒಟ್ಟು 5.19 ಕೋಟಿ ರೂ. ವೆಚ್ಚವಾಗಲಿದೆ. ಮುಂದಿನ 30 ವರ್ಷಗಳ ಅವಧಿಗೆ ಲೆಕ್ಕಾಚಾರ ಮಾಡಿ ಎಷ್ಟು ಮತಯಂತ್ರಗಳನ್ನು ಇರಿಸಬಹುದು ಎಂದು ಅಂದಾಜಿಸಿ, ಚುನಾವಣಾ ಆಯೋಗದ ನಿಯಮಾವಳಿಯಂತೆ ಕಟ್ಟಡ ನಿರ್ಮಿಸಲಾಗುತ್ತಿದೆ.
ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಕಾಮಗಾರಿ ಶೇ.60ರಷ್ಟು ಪೂರ್ಣಗೊಂಡಿದೆ. ಆರೋಗ್ಯ, ಗಣಿ, ಕಾರ್ಮಿಕ ಸೇರಿದಂತೆ ಬಹುತೇಕ ಮಹತ್ವದ ಇಲಾಖೆಗಳು ಇಲ್ಲಿಯೇ ಬರುವುದರಿಂದ ಆ ಇಲಾಖೆಗಳಿಂದಲೂ ಅನುದಾನ ನಿರೀಕ್ಷಿಸಲಾಗಿದೆ. ಇದನ್ನು ಹೊಂದಿಸಿಕೊಂಡು ಉಳಿದ ಕಾಮಗಾರಿ ಹಂತಹಂತವಾಗಿ ಪೂರ್ಣಗೊಳಿಸಲಾಗುವುದು.
ಡಾ.ರಾಜೇಂದ್ರ ಕೆ.ವಿ. ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ