

ಚಿತ್ರದುರ್ಗ: ಅಧಿಸೂಚಿತ (ರಿಸರ್ವ್) ಅರಣ್ಯಪ್ರದೇಶಗಳ ದಾಖಲೆಗಳು ಹಾಗೂ ಈಗಾಗಲೇ ಬಹುಪಾಲು ಪ್ರದೇಶಗಳ ಗಡಿ ರೇಖೆಗಳು ಸ್ಪಷ್ಟವಾಗಿದ್ದರೂ ಗೊಂದಲ ಇರುವ ಕೆಲವೆಡೆ ಜಂಟಿ ಮೋಜಿಣಿ ನಡೆಸಿ ಗಡಿ ಗುರುತಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಹಸೀಲ್ದಾರ್, ವಲಯ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿಯಲ್ಲಿ ಸೋಮವಾರ ವನ(ಸಂರಕ್ಷಣೆ ಮತ್ತು ಸಂವರ್ಧನೆ)ಅಧಿನಿಯಮ 1980, ತಿದ್ದುಪಡಿ ಅಧಿನಿಯಮ 1988 ಮತ್ತು ನಿಯಮ 2023ರಂತೆ ಅರಣ್ಯಭೂಮಿಗಳ ಕ್ರೋಡೀಕೃತ ದಾಖಲೆಗಳನ್ನು ಸಿದ್ಧಪಡಿಸುವ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದರು.
ಪರಿಭಾವಿತ(ಡೀಮ್ಡ್)ಅರಣ್ಯ ಪ್ರದೇಶಗಳ ಪಟ್ಟಿ ಪರಿಶೀಲಿಸಿ ಮಾನದಂಡಗಳನ್ವಯ ಕ್ಷೇತ್ರ ಮಟ್ಟದಲ್ಲಿ ಪರಿಶೀಲಿಸಿ ವರದಿ ಸಲ್ಲಿಸಲು ಜಂಟಿ ಪರಿಶೀಲನಾ ಸಮಿತಿ ಹಾಗೂ ಕ್ಷೇತ್ರ ಮಟ್ಟದ ಜಂಟಿ ಮೋಜಿಣಿ ತಂಡಗಳಿಗೆ ನಿರ್ದೇಶಿಸಿದರು. ಅರಣ್ಯ ಭೂಮಿಗಳ ಕ್ರೋಡೀಕೃತ ದಾಖಲೆ ಸಂಬಂಧ ಸರ್ವೇ ನಡೆಸಲು ಸಮಯ ನಿಗದಿಪಡಿಸಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯನಾಯ್ಕ ಮಾತನಾಡಿ, ಸರ್ವೋಚ್ಚ ನ್ಯಾಯಾಲಯದ 2024ರ ಫೆಬ್ರವರಿ 19ರ ಆದೇಶದಂತೆ ಅರಣ್ಯ ಭೂಮಿಗಳ ಕ್ರೋಡೀಕೃತ ದಾಖಲೆಗಳನ್ನು ಸಿದ್ಧಪಡಿಸಲು ರಾಜ್ಯ, ಕಂದಾಯ ವಿಭಾಗ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಅಧಿಸೂಚಿತ, ಘೋಷಿತ ಅರಣ್ಯ ಹಾಗೂ ನಿಘಂಟು ವ್ಯಾಖ್ಯಾನದಡಿ ಅರಣ್ಯವನ್ನು ಪರಿಭಾವಿತ ಪ್ರದೇಶಗಳೆಂದು ದಾಖಲೆಗಳನ್ನು ವರ್ಗೀಕರಿಸಬೇಕಾಗಿದೆ ಎಂದರು.
ಅರಣ್ಯಭೂಮಿಗಳನ್ನು ಗುರುತಿಸಿ ಕ್ರೋಡೀಕೃತ, ಏಕೀಕೃತ ದಾಖಲೆಗಳನ್ನು ವರ್ಗೀಕರಿಸಿ ವರದಿ ಸಲ್ಲಿಸಲು ತಾಲೂಕು ಮಟ್ಟದ ಜಂಟಿ ಪರಿಶೀಲನಾ ಸಮಿತಿ ಹಾಗೂ ಕ್ಷೇತ್ರ ಮಟ್ಟದ ಜಂಟಿ ಮೋಜಿಣಿ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಜಿಪಂ ಸಿಇಒ ಡಾ.ಎಸ್.ಆಕಾಶ್, ಭೂ ದಾಖಲೆಗಳ ಉಪನಿರ್ದೇಶಕ ರಾಮಾಂಜನೇಯ, ತೋಟಗಾರಿಕೆ ಉಪ ನಿರ್ದೇಶಕ ಶರಣ ಬಸಪ್ಪ ಗೋಗಿ ಇತರರಿದ್ದರು.
ಕೋಟ್
ಪರಿಭಾವಿತ ಅರಣ್ಯ ಭೂಮಿಗಳ ಕ್ಷೇತ್ರ ಮಟ್ಟದ ಜಂಟಿ ಮೋಜಿಣಿಗಾಗಿ ಎಲ್ಲ ತಾಪಂ ಅಧಿಕಾರಿಗಳಿಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು.
ಡಾ.ಎಸ್.ಆಕಾಶ್, ಸಿಇಒ ಜಿಪಂ
--