ಬಸ್ ನಿಲ್ದಾಣದಲ್ಲಿ ಜಿಲ್ಲಾಧಿಕಾರಿಯಿಂದ ಮತದಾನ ಪ್ರಾತ್ಯಕ್ಷಿಕೆ

IMG-20230304-WA0003.jpg
Published on

ಬೆಳಗಾವಿ:ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತ ಚಲಾಯಿಸಬೇಕು ಎಂಬ ಉದ್ದೇಶದಿಂದ  ಅಣುಕು ಮತದಾನದ ಬಳಿಕ ಮತ ಎಣಿಕೆ ಮಾಡಿ ಪ್ರಾತ್ಯಕ್ಷಿಕೆಯನ್ನು ತೋರಿಸಲಾಗುತ್ತಿದೆ. ಅಲ್ಲದೆ, ಮತದಾರರು ತಮ್ಮ  ತಗಟ್ಟೆ ಮಾಹಿತಿಯನ್ನು ಕೂಡ ತಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ನಗರದ ಕೇಂದ್ರ ಬಸ್ ನಿಲ್ದಾನದಲ್ಲಿ ಶನಿವಾರ  ಆಯೋಜಿಸಿದ್ದ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು,ವಿಧಾನ ಸಭೆ ಚುನಾವಣೆಯಲ್ಲಿ ಇವಿಎಂ ಮತಯಂತ್ರಗಳು ಯಾವ ರೀತಿ ಕಾರ್ಯನಿರ್ವಹಿಸುತ್ತವೆ ಮತ್ತು ಚುನಾವಣೆಯಲ್ಲಿ ಬಳಸಲಾಗುವ ಮತಯಂತ್ರಗಳ ಮೂಲಕ ಮತದಾನ ವಿಧಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ  ವಿದ್ಯುನ್ಮಾನ ಮತ ಯಂತ್ರಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಮತ್ತು ಅವುಗಳ ಮೂಲಕ ಸಾರ್ವಜನಿಕರು ಹೇಗೆ ಮತ ಚಲಾವಣೆ ಮಾಡಬೇಕು ಎಂಬುದರ ಕುರಿತು ಜಿಲ್ಲೆಯಾದ್ಯಂತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾಮಗಳಲ್ಲಿ, ಬಸ್ ನಿಲ್ದಾಣದಲ್ಲಿ, ರೈಲ್ವೆ ನಿಲ್ದಾಣ, ಮಾರುಕಟ್ಟೆ ಹಾಗೂ ಕಡಿಮೆ ಮತದಾನ ಆಗಿರುವ ಕ್ಷೇತ್ರ, ಮತಗಟ್ಟೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ  ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಲಾಗಿದೆ ಎಂದರು.
ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಎಲ್ಇಡಿ ಫಲಕಗಳ ಸಂಚಾರಿ ವಾಹನಗಳ ಮೂಲಕ ನಗರದಲ್ಲಿ ಸಂಚರಿಸಿ ಮತದಾರದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ, ಹೊಸ ಮತದಾರರಿಗೆ, ಗೃಹಣಿಯರಿಗೆ ಮತದಾನದ ಮಹತ್ವ ತಿಳಿಸುವುದರೆ ಜತೆಗೆ ಮತದಾನ ಹೇಗೆ ಮಾಡಬೇಕು ಎಂಬುದರ ಕುರಿತು ಖುದ್ದಾಗಿ ಮಾಹಿತಿ ನೀಡಲಾಗುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ಮಾಡಲು ಗುರಿ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ಜಿಪಂ ಸಿಇಒ, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹರ್ಷಲ್ ಭೋಯರ್ ಮಾತನಾಡಿದ, 2023 ವಿಧಾನಸಭೆ ಚುನಾವಣೆಯಲ್ಲಿ ನೂರಕ್ಕೆ ನೂರಷ್ಟು ಮತದಾನ ಆಗಬೇಕು ಎಂಬ ಸಂಕಲ್ಪದೊಂದಿಗೆ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಅಭಿಯಾನ ಆರಂಭಿಸಲಾಗಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬ ಉದ್ದೇಶದಿಂದ ಅವರಿಗೆ ಅರಿವು ಮೂಡಿಸಲು ಸಾರ್ವಜನಿಕ ವಲಯಗಳಲ್ಲಿ ಜಾಗೃತಿ ಅಭಿಯಾನ ಎಂದರು.
ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ಈಗಲೂ ಅವಕಾಶ ಇರುತ್ತದೆ. ನಮೂನೆ 6 ಭರ್ತಿ ಮಾಡಿ ಹೆಸರು ಸೇರ್ಪಡೆ ಮಾಡಬಹುದು. ಹೊಸ ಮತದಾರ ನೋಂದಣಿ, ತಿದ್ದುಪಡಿಗೆ ಆನ್‌ಲೈನ್ ಹಾಗೂ ಸ್ಥಳೀಯ ಬಿಎಲ್ ಓ ಗಳ ಮೂಲಕ ಕೂಡ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ  ಕೇಂದ್ರ ಬಸ್ ನಿಲ್ದಾಣದಲ್ಲಿ ನೆರೆದಿದ್ದ ಸಾರ್ವಜನಿಕರಿಂದ  ಅಣುಕು ಮತದಾನ ಮಾಡಿಸಲಾಯಿತು. ಮತದಾನ ಬಳಿಕ ವಿವಿಪ್ಯಾಟ್  ಮೂಲಕ ಬರುವ ಸ್ಲಿಪ್‌ಗಳನ್ನು ತೋರಿಸಿ ಅವರ ಮತದಾನದ  ಕುರಿತು ಖಚಿತಪಡಿಸಲಾಯಿತು.
ಮಹಾನಗರ ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ, ಉಪ ಆಯುಕ್ತೆ ಭಾಗ್ಯಶ್ರೀ  ಹುಗ್ಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net