ಮಂಗಳೂರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಸಂಚಾರ, ಪರಿಶೀಲನೆ

DC naleen athul school visit Managloor village koppal
Published on

ಕೊಪ್ಪಳ: ಜನಸ್ಪಂದನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕುಕನೂರ ತಾಲೂಕಿನ ಮಂಗಳೂರ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಜಿಲ್ಲಾಧಿಕಾರಿ ನಲಿನ್​ ಅತುಲ್​ ಮಂಗಳೂರ ಗ್ರಾಮದ ವಿವಿಧೆಡೆ ಸಂಚರಿಸಿ ಪರಿಶೀಲನೆ ಕೈಗೊಂಡರು.

ಮೊದಲಿಗೆ ಕೆಪಿಎಸ್​ ಶಾಲೆಯ ಹತ್ತಿರದ ಅಂಗನವಾಡಿ ಕೇಂದ್ರ-10ಕ್ಕೆ ಭೇಟಿ ನೀಡಿ ಅಲ್ಲಿನ ಬಾಲ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಪರಿಶೀಲಿಸಿದರು. ಅಂಗನವಾಡಿ ಮಕ್ಕಳಿಗಾಗಿ ಸಿದ್ದಪಡಿಸಿರುವ ವಿವಿಧ ಸಾಮಗ್ರಿಗಳನ್ನು ಅಂಗನವಾಡಿಯ ಮೇಲ್ವಿಚಾರಕಿ ಶಂಶಾದ್​ಬೇಗಂ ಅವರು ಜಿಲ್ಲಾಧಿಕಾರಿಗಳಿಗೆ ತೋರಿಸಿ ಕಲಿಕಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿ ಮಕ್ಕಳ ಕಲಿಕೆಯು ಬೇರೆ ಮಕ್ಕಳಿಗಿಂತ ಸಾಕಫಿ್ಟು ಭಿನ್ನವಾಗಿರುತ್ತದೆ. ಇದನ್ನು ಮೊದಲು ಅರ್ಥೈಸಿಕೊಳ್ಳಬೇಕು. ಚಿಕ್ಕ ಮಕ್ಕಳು ವಸ್ತುಗಳನ್ನು ನೋಡುತ್ತ ಕಲಿಯುವುರಿಂದ ಅಂತಹ ಕಲಿಕಾ ಪರಿಸರ ಇರುವಂತೆ ನೋಡಿಕೊಳ್ಳಬೇಕು ಎಂದು ಅಂಗನವಾಡಿ ಮೇಲ್ವಿಚಾರಕಿಯರು ಮತ್ತು ಸಹಾಯಕರಿಗೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.

ಬಳಿಕ ಜಿಲ್ಲಾಧಿಕಾರಿಗಳು ಕೆಪಿಎಸ್​ ಶಾಲೆಯ ಎಲ್​ಕೆಜಿ ತರಗತಿಗೆ ತೆರಳಿದರು. ಶಿಕ್ಷಕಿ ಸುನಿತಾ ಹಳೆದರ ಅವರು ಎಲ್​ಕೆಜಿ ಮಕ್ಕಳಿಗೆ ಉತ್ತಮವಾಗಿ ಪಾಠ ಮಾಡುತ್ತಿರುವುದನ್ನು ಗಮನಿಸಿದರು. ಕೆಲಹೊತ್ತು ಮಕ್ಕಳೊಂದಿಗೆ ಆಪ್ತವಾಗಿ ಮಾತನಾಡಿ ಅವರ ಕಲಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಯುಕೆಜಿ ತರಗತಿಗೆ ಭೇಟಿ ನೀಡಿ ಶಿಕ್ಷಕಿ ಬಸಮ್ಮ ಅವರ ಮೂಲಕ ಮಕ್ಕಳ ಕಲಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ವಸತಿ ನಿಲಯಕ್ಕೆ ಭೇಟಿ : ಡಾ.ಬಿ.ಆರ್​.ಅಂಬೇಡ್ಕರ್​ ಮೆಟ್ರಿಕ್​ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದರು. ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿನಿಯರು ಮತ್ತು ವಾರ್ಡನ್​ ಅವರೊಂದಿಗೆ ಮಾತನಾಡಿ ವಸತಿ ನಿಲಯದಲ್ಲಿನ ವ್ಯವಸ್ಥೆಯ ಬಗ್ಗೆ ಚರ್ಚಿಸಿದರು.

ಗಟಾರ್​ ಪರಿಶೀಲನೆ: ವಸತಿ ನಿಲಯಕ್ಕೆ ಹತ್ತಿಕೊಂಡ ಗಟಾರಿನಲ್ಲಿನ ನೀರು ಮುಂದಕ್ಕೆ ಹರಿಯದೇ ಹಾಗೆ ನಿಂತು ಸೊಳ್ಳೆಗಳು ಹೆಚ್ಚಾಗಿ ಆರೋಗ್ಯಕ್ಕೆ ತೊಂದರೆಯಾಗುತ್ತಿದೆ ಎಂದು ವಸತಿ ನಿಲಯದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಬಳಿಕ ಜಿಲ್ಲಾಧಿಕಾರಿಗಳು ಗಟಾರನ್ನು ಖದ್ದು ವೀಕ್ಷಣೆ ನಡೆಸಿ ಅಲ್ಲಿನ ನಿವಾಸಿಗಳೊಂದಿಗೆ ಮಾಹಿತಿ ಪಡೆದುಕೊಂಡರು. ಗಟಾರಿನ ಬಗ್ಗೆ ಪರಿಶೀಲನೆ ಮಾಡಲು ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಶಶಿಧರ್​ ಸಕ್ರಿ ಅವರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮಂಗಳೂರ ಗ್ರಾಮದ ಪಿಡಿಓ ನೀಲಮ್ಮ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net