

ಮಂಡ್ಯ: ಮೈಕ್ರೋ ಫೈನಾನ್ಸ್ ಸಂಸ್ಥೆ, ಸಾಲ ನೀಡಿಕೆ ಏಜೆನ್ಸಿ ಅಥವಾ ಲೇವಾದೇವಿದಾರರು 30 ದಿನದೊಳಗೆ ಅವುಗಳು ಕಾರ್ಯನಿರ್ವಹಿಸುತ್ತಿರುವ ಅಥವಾ ಮುಂದೆ ಕಾರ್ಯನಿರ್ವಹಿಸಲು ಉದ್ದೇಶಿಸಿರುವ ಗ್ರಾಮ/ಪಟ್ಟಣದ ಮಾಹಿತಿ ಜತೆಗೆ ವಿಧಿಸಿರುವ ಅಥವಾ ವಿಧಿಸಲು ಉದ್ದೇಶಿಸಿರುವ ಬಡ್ಡಿ ದರ ಸೇರಿದಂತೆ ಜಾಗರೂಕ ನಿರ್ವಹಣಾ ಮತ್ತು ವಸೂಲಾತಿ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿ ಜಿಲ್ಲಾಡಳಿತದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಸೂಲಾತಿ ಪ್ರಕ್ರಿಯೆ ನಿರ್ವಹಿಸಲು ಅಧಿಕೃತಗೊಳಿಸಲಾದ ವ್ಯಕ್ತಿಗಳ ಪಟ್ಟಿ, ಸಾಲಗಾರನ ವಿವರ(ಹೆಸರು, ವಿಳಾಸ, ಒಟ್ಟು ಸಾಲ, ವಸೂಲಾದ ಮೊತ್ತ, ಉಳಿದ ಬಾಕಿ) ಲಿಖಿತ ಮುಚ್ಚಳಿಕೆಯಲ್ಲಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು. ಈ ನೋಂದಣಿಯು ಒಂದು ವರ್ಷಕ್ಕೆ ಒಳಪಟ್ಟಿರುತ್ತದೆ. ನಂತರ ನವೀಕರಣ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳದ ಸ್ವಸಹಾಯ ಗುಂಪುಗಳು, ಮೈಕ್ರೋ ಫೈನಾನ್ಸ್ ಸಂಸ್ಥೆ, ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಲೇವಾದೇವಿದಾರರು ಸಾಲ ನೀಡಲು ಅಥವಾ ವಸೂಲು ಮಾಡುವ ಅಧಿಕಾರ ಹೊಂದಿರುವುದಿಲ್ಲ. ಈ ಅಧ್ಯಾದೇಶದಡಿ ಯಾವುದೇ ಆಸ್ತಿಯನ್ನು ಅಡಮಾನ ಮಾಡಿಕೊಂಡು ಸಾಲ ನೀಡಲು ಅವಕಾಶವಿರುವುದಿಲ್ಲ. ನೋಂದಣಿ ಮಾಡಿಕೊಳ್ಳದೇ ಬಲವಂತ ವಸೂಲಾತಿ ಮಾಡುತ್ತಿರುವ ಪ್ರಕರಣ ಕಂಡು ಬಂದಲ್ಲಿ ಅಥವಾ ದೂರು ಬಂದಲ್ಲಿ ಈ ಅಧ್ಯಾದೇಶದಲ್ಲಿ ತಿಳಿಸಿರುವಂತೆ ದೂರು ದಾಖಲಾಸಿಲಾಗುವುದು. ಹಾಗೂ ಈ ಪ್ರಕರಣದಲ್ಲಿ 10 ವರ್ಷ ಜೈಲುವಾಸ ಹಾಗೂ 5 ಲಕ್ಷ ರೂವರೆಗೂ ದಂಡ ವಿಧಿಸಲು ಅವಕಾಶವಿದೆ ಎಂದು ಎಚ್ಚರಿಕೆ ನೀಡಿದ ಡಿಸಿ, ನೋಂದಣಿ ಮಾಡಿಕೊಂಡು ಸಾಲ ನೀಡುವ ಸಂದರ್ಭದಲ್ಲಿ ವಿಧಿಸುವ ಬಡ್ಡಿ, ವಸೂಲಾತಿಗೆ ಸಂಬಂಧಿಸಿದಂತೆ ಎಲ್ಲ ವಿವರವನ್ನು ಕನ್ನಡದಲ್ಲಿ ಲಿಖಿತವಾಗಿ ಸಾಲಗಾರರಿಗೆ ತಿಳಿಸಬೇಕು. ಬಲವಂತ ವಸೂಲಾತಿ ಕಂಡುಬಂದಲ್ಲಿ ಸ್ವಯಂ ದೂರು ದಾಖಲಿಸಲು ಸಹ ಅವಕಾಶವಿದೆ ಎಂದರು.
ಅಂತೆಯೇ ಸಾಲ ವಸೂಲಾತಿ ಸಂದರ್ಭದಲ್ಲಿ ನೀಡುವ ಕಿರುಕುಳ ಹಾಗೂ ಬಲವಂತದ ವಸೂಲಾತಿ ತಪ್ಪಿಸಲು ರಾಜ್ಯ ಸರ್ಕಾರ ಪ್ರತಿಬಂಧಕ ಅಧ್ಯಾದೇಶ-2025 ಅನ್ನು ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಈ ಆದೇಶ ಕಟ್ಟುನಿಟ್ಟಾಗಿ ಅನುಷ್ಠಾನವಾಗಬೇಕು. ನೋಂದಣಿಯಾಗಿರುವ ಸಂಸ್ಥೆಗಳು ಸಾಲ ವಸೂಲಾತಿಯನ್ನು ಆರ್‌ಬಿಐ ನಿಯಮದಂತೆ ಮಾಡಬೇಕು. ನೋಂದಣಿಯಾಗಿರುವ ಅಥವಾ ನೊಂದಣಿಯಾಗದಿರುವ ಸಂಸ್ಥೆಗಳು ಸಾಲ ಅಥವಾ ಬಡ್ಡಿ ವಸೂಲಾತಿ ಸಂದರ್ಭದಲ್ಲಿ ಈ ಆಸ್ತಿಯನ್ನು ಅಡಮಾನ ಮಾಡಿಕೊಳ್ಳಲಾಗಿದೆ ಎಂದು ಗೋಡೆಗಳ ಮೇಲೆ ಬರೆಯುವ ಅಮಾನವೀಯ ಕೃತ್ಯ ಕಂಡುಬಂದರೆ ಜಿಲ್ಲಾಡಳಿತ ಸಹಿಸುವುದಿಲ್ಲ. ಅವರನ್ನು ಪತ್ತೆ ಹಚ್ಚಿ ಕಾನೂನು ರೀತ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿಗಳಾದ ಗಂಗಾಧರಸ್ವಾಮಿ, ತಿಮ್ಮಯ್ಯ, ಉಪವಿಭಾಗಾಧಿಕಾರಿಗಳಾದ ಶ್ರೀನಿವಾಸ್, ಶಿವಮೂರ್ತಿ, ಲೀಡ್‌ಬ್ಯಾಂಕ್ ಮ್ಯಾನೇಜರ್ ಅರುಣ್‌ಕುಮಾರ್ ಇತರರಿದ್ದರು.