ಸೌಹಾರ್ದತೆಯಿಂದ ಹಬ್ಬ ಆಚರಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ

DC meeting with various community leaders Mandya
Published on

ಮಂಡ್ಯ: ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಹಾಗೂ ಸೌಹಾರ್ದತೆಯ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆ ಮಾಡೋಣ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಸಮುದಾಯದ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಬ್ಬಗಳ ಆಚರಣೆಗೆ ಸರ್ಕಾರದಿಂದ ಹೊರಡಿಸಿರುವ ನಿಯಮ ಹಾಗೂ ಮಾರ್ಗದರ್ಶನಗಳಿರುತ್ತದೆ. ಅವುಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಉಚ್ಛ ನ್ಯಾಯಾಲಯ ಈಗಾಗಲೇ ಆದೇಶ ಹೊರಡಿಸಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಹಾನಿಕಾರಕ ಬಣ್ಣ ಲೇಪಿತ ಗಣಪತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವಂತಿಲ್ಲ. ಈ ಹಿನ್ನಲೆಯಲ್ಲಿ ಜೇಡಿಮಣ್ಣಿನಲ್ಲಿ ನಿರ್ಮಾಣ ಮಾಡಿರುವ ಮುದ್ದಾದ ಗಣಪತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಿ. ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಸಿಂಗಲ್ ವಿಂಡೋ ಸಿಸ್ಟಮ್ ಮೂಲಕ ಅನುಮತಿ ನೀಡಲಾಗುತ್ತಿದೆ. ಅರ್ಜಿಯಲ್ಲಿ ಗಣಪತಿ ವಿಸರ್ಜನೆ ಮಾಡುವ ಸ್ಥಳವನ್ನು ಸಹ ನಮೂದಿಸುವುದು ಕಡ್ಡಾಯವಾಗಿರುತ್ತದೆ ಎಂದರು.

ಗಣಪತಿಯನ್ನು ಸ್ಥಳೀಯ ಸಂಸ್ಥೆಗಳು ನಿಗದಿ ಮಾಡಿರುವ ಸ್ಥಳದಲ್ಲಿ ವಿಸರ್ಜನೆ ಮಾಡಿ. ಅಲಂಕಾರಕ್ಕೆ ಬಳಸುವ ವಸ್ತುಗಳನ್ನು ಬೇರ್ಪಡಿಸಿ ವಿಸರ್ಜನೆ ಮಾಡಿ. ಪ್ಲಾಸ್ಟಿಕ್ ವಸ್ತುಗಳನ್ನು ಅಲಂಕಾರಕ್ಕೆ ಬಳಸಬೇಡಿ. ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ರೀತಿಯ ಕೋಮುಗಲಭೆಗಳು ನಡೆದಿಲ್ಲ. ಇನ್ನು ಮುಂದೆಯೂ ಕೂಡ ಅಂತಹ ಸಂಗತಿಗಳಿಗೆ ಅವಕಾಶ ಕೊಡದಂತೆ ಶಾಂತಿಯುತವಾಗಿ, ಪರಸ್ಪರವಾಗಿ, ಪ್ರತಿಯೊಬ್ಬರ ಸಹಭಾಗಿತ್ವ ಸಹಕಾರದಿಂದ ಪ್ರತಿಯೊಬ್ಬರೂ ಅಣ್ಣ-ತಮ್ಮಂದಿರು ಎಂಬ ಭಾವನೆಯಿಂದ ಹಬ್ಬ ಆಚರಣೆ ಮಾಡಿ. ಧ್ವನಿವರ್ಧಕಗಳಲ್ಲಿ ಧ್ವನಿ 30 ಡೆಸಿಬಲ್ ಮಾತ್ರ ಇರಬೇಕು. ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸುವಂತಿಲ್ಲ. ನಿಯಮಗಳನ್ನು ಕಡ್ಡಾಯವಾಗಿ ಪರಿಗಣಿಸಬೇಕು. ಒಂದು ವೇಳೆ ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಎರಡು ಹಬ್ಬಗಳು ಕೂಡ ಪ್ರಮುಖವಾಗಿರುವುದರಿಂದ ಧರ್ಮಗಳಲ್ಲಿ ಬೇಧ-ಭಾವ ಮಾಡದೆ ಪರಸ್ಪರ ಸಹಕಾರದಿಂದ ಆಚರಣೆ ಮಾಡಿ. ಗ್ರಾಮ ಪಂಚಾಯಿತಿ ಹಂತದಲ್ಲಿ ಯಾವ ಸಹಾಯ ಸಹಕಾರ ಬೇಕು ಅದನ್ನು ನೀಡಲಾಗುವುದು. ಜಿಲ್ಲೆಗೆ ಯಾವುದೇ ರೀತಿಯ ಕಪ್ಪು ಚುಕ್ಕೆ ಬರದಂತೆ ಹಬ್ಬಗಳ ಆಚರಣೆ ಮಾಡಿ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಎರಡು ಹಬ್ಬ ಜತೆಗೆ ನಡೆಯುವುದರಿಂದ ಅಹಿತಕರ ಘಟನೆ ಸಂಭವಿಸದಂತೆ, ಗೊಂದಲಮಯ ವಾತಾವರಣ ಸೃಷ್ಟಿ ಮಾಡದಂತೆ ಎಚ್ಚರಿಕೆ ವಹಿಸಿ ಆಚರಣೆ ಮಾಡಬೇಕು. ಅನುಮತಿ ಇಲ್ಲದ ಕಡೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವಂತಿಲ್ಲ. ಮೆರವಣಿಗೆ ಹೋಗುವ ರೂಟ್‌ಮ್ಯಾಪ್ ಅನ್ನು ಪೊಲೀಸ್ ಇಲಾಖೆಗೆ ಒದಗಿಸಬೇಕು. ಕೆಲವು ವಿವಾದಾತ್ಮಕ ಸ್ಥಳಗಳಿರುತ್ತವೆ, ಆ ಸ್ಥಳದಲ್ಲಿ ಗಣಪತಿ ಪ್ರತಿಷ್ಠಾಪಿಸುವ ಬದಲು ಬೇರೆ ಸ್ಥಳಗಳನ್ನು ಆಯ್ಕೆ ಮಾಡಿ ಎಂದರು.

ಮಂಟಪ ಹಾಕುವ ಸಮಯದಲ್ಲಿ ಸರಿಯಾದ ಜಾಗ ಆಯ್ಕೆ ಮಾಡಬೇಕು. ವಿಗ್ರಹವು 5 ಅಡಿಗಿಂತ ಹೆಚ್ಚಿದ್ದರೆ ಮೆರವಣಿಗೆ ಹೋಗುವ ಸಮಯದಲ್ಲಿ ಕರೆಂಟ್ ವೈಯರ್‌ಗಳಿಗೆ ಮಾವಿನ ತೋರಣಗಳು ತಗುಲಿ ಕೆಲವೊಂದು ಕಡೆ ಅಹಿತಕರ ಘಟನೆಗಳು ಸಂಭವಿಸಬಹುದು. ಕತ್ತಲಲ್ಲಿ ಗಣಪತಿ ವಿಸರ್ಜನೆ ಮಾಡುವಾಗ ನೀರಿನಲ್ಲಿ ಮುಳುಗುವ ಅವಘಡ ಸಂಭವಿಸಬಹುದು. ಆದ್ದರಿಂದ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಿ. ಗೌರಿ ಹಾಗೂ ಗಣೇಶ ಹಬ್ಬದ ಸಂದರ್ಭದಲ್ಲಿ ರಾಸಾಯನಿಕ ಬಣ್ಣಗಳಿಂದ ಮಾಡಿದ ಮೂರ್ತಿಗಳ ಬದಲಾಗಿ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿದ ನಂತರ ಸಾಮೂಹಿಕವಾಗಿ ಗುರುತಿಸಿರುವ ಸ್ಥಳಗಳಲ್ಲಿ ಕಡ್ಡಾಯವಾಗಿ ವಿಸರ್ಜಿಸಬೇಕು ಎಂದು ಸೂಚಿಸಿದರು.

ನೈಸರ್ಗಿಕವಾಗಿ ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಟ್ಯಾಂಕ್‌ಗಳಲ್ಲಿ, ಕಲ್ಯಾಣಿಗಳ ಪಕ್ಕದಲ್ಲಿ ಹಸಿ ಕಸ (ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ, ಇತ್ಯಾದಿ ಅಲಂಕಾರಿಕ ವಸ್ತುಗಳು) ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೆ ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲಾಗುವುದು. ಅದರಂತೆ ಪರಿಸರ, ಜಲಮಾಲಿನ್ಯ ಮಾಡದೆ ಕಸವನ್ನು ವಾಹನದಲ್ಲಿ ಹಾಕಬೇಕು. ಸಾರ್ವಜನಿಕವಾಗಿ ಇಡಲಾಗುವ ಗಣೇಶ ಮೂರ್ತಿಗಳನ್ನು ಪ್ರತಿ ಸಮಿತಿಯವರು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯಿಂದ ನಿಬಂಧನೆಗೊಳಪಟ್ಟ ಅನುಮತಿಗಳನ್ನು ಪಡೆದ ನಂತರವೇ ಸ್ಥಾಪಿಸುವುದು. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯ ತನಕ ಧ್ವನಿವರ್ಧಕಗಳ ಬಳಕೆ ನಿಷೇಧಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ-1 ತಿಮ್ಮಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಗಂಗಾಧರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net