ಅನಧಿಕೃತವಾಗಿ ಕಬ್ಬು ಖರೀದಿಸಿದರೆ ಕ್ರಮ: ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ

DC meeting with sugar factory officials Mandya
Published on

ಮಂಡ್ಯ: ಜಿಲ್ಲೆಯಲ್ಲಿರುವ ಐದು ಸಕ್ಕರೆ ಕಾರ್ಖಾನೆಗಳು ತಮಗೆ ನಿಗದಿ ಮಾಡಿರುವ ವ್ಯಾಪ್ತಿಯಲ್ಲಿ ಮಾತ್ರ ರೈತರಿಂದ ಕಬ್ಬನ್ನು ಖರೀದಿಸಬೇಕು. ಒಂದು ವೇಳೆ ಅನಧಿಕೃತವಾಗಿ ಬೇರೆ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ರೈತರಿಂದ ಕಬ್ಬು ಖರೀದಿಸಿದರೆ ಅಂತಹವರ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿ ಬರದ ಹಿನ್ನೆಲೆಯಲ್ಲಿ ಕಬ್ಬಿನ ಇಳುವರಿ ಸಹ ಕಡಿಮೆ ಇರುತ್ತದೆ. ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆಗೆ ಸ್ಪರ್ಧೆ ಉಂಟಾಗುವ ಸಾಧ್ಯತೆಯಿದ್ದು, ಸಕ್ಕರೆ ಕಾರ್ಖಾನೆಗಳು ಲಾಭ ಅಥವಾ ನಷ್ಟ ಯಾವುದೇ ಉಂಟಾದರು ತಮ್ಮ ವ್ಯಾಪ್ತಿಗೆ ನಿಗದಿಪಡಿಸಿದ ಕಬ್ಬನ್ನು ಮಾತ್ರ ಅರೆಯಬೇಕು ಎಂದರು.

ಏಕ ಕಾಲದಲ್ಲಿ ಕಬ್ಬು ಅರೆಯುವಿಕೆಗೆ ಪ್ರಸ್ತಾವನೆ 2024-25 ನೇ ಸಾಲಿನ ಹಂಗಾಮಿನ ಕಬ್ಬು ಅರೆಯುವಿಕೆಗೆ ಸಂಬಂಧಿಸಿದಂತೆ ಯಾವುದಾದರೂ ಒಂದು ಸಕ್ಕರೆ ಕಾರ್ಖಾನೆ ಬೇರೆ ಸಕ್ಕರೆ ಕಾರ್ಖಾನೆಗಿಂತ ಮೊದಲು ಅರೆಯುವಿಕೆ ಪ್ರಾರಂಭಿಸಿದರೆ ಎಲ್ಲ ರೈತರು ತಮ್ಮ ಕಬ್ಬು ಖರೀದಿಸುವಂತೆ ಮುಗಿ ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಐದು ಸಕ್ಕರೆ ಕಾರ್ಖಾನೆಗಳು ಏಕಕಾಲದಲ್ಲಿ ಕಬ್ಬು ಅರೆಯಲು ಅಂದರೆ ಜು.15 ರಿಂದ 30 ರವರೆಗೆ ಯಾವುದಾದರು ಒಂದು ದಿನಾಂಕವನ್ನು ನಿಗದಿಪಡಿಸಿಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬು ಬೆಳೆಯುವ ಪ್ರಕ್ರಿಯೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಬೇಕು. ರೈತರ ಕುಂದು ಕೊರತೆ ಸಭೆಯಲ್ಲಿ ರೈತರು ಕಬ್ಬು ಬಿತ್ತನೆಗೆ ಸಕ್ಕರೆ ಕಾರ್ಖಾನೆಗಳು ಬಿತ್ತನೆ ಕಬ್ಬು ಒದಗಿಸುವಂತೆ ಚರ್ಚಿಸಿದ್ದಾರೆ. ಕಾರ್ಖಾನೆಗಳು ರೈತರಿಗೆ ನಡೆಸುವ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಂತೆ ವರದಿ ನೀಡುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಎಂ.ಪಿ.ಕೃಷ್ಣಕುಮಾರ್ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net