

ಮಂಡ್ಯ: ರೈತರು ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿ 14 ದಿನ ಕಳೆದರೂ ಎಫ್‌ಆರ್‌ಪಿ ದರದಂತೆ ಹಣ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ 10 ದಿನದೊಳಗೆ ಹಣ ಪಾವತಿಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಗೆ ಸಕಾಲದಲ್ಲಿ ಹಣ ಪಾವತಿಯಾಗದಿರುವ ಸಂಬಂಧ ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ಎಲ್ಲ ಕಾರ್ಖಾನೆಗಳು ರೈತರಿಗೆ ಕಬ್ಬು ಹಣ ಪಾವತಿ ಮಾಡಲು ವಿಳಂಬಕ್ಕೆ ಕಾರಣ ನೀಡುವಂತೆ ತಿಳಿಸಿದರು.
ವಿವಿಧ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ 53.48 ಕೋಟಿ ರೂ ಬಾಕಿ ಕೊಡಬೇಕಿದೆ. ಎನ್.ಎಸ್.ಎಲ್, ಚಾಮುಂಡೇಶ್ವರಿ ಹಾಗೂ ಕೋರಮಂಡಲ್ ಸಕ್ಕರೆ ಕಾರ್ಖಾನೆ ಹೆಚ್ಚು ಬಾಕಿ ಉಳಿಸಿಕೊಂಡಿರುವುದು ಕಂಡುಬಂದಿದೆ. ಆದ್ದರಿಂದ ಸೂಚನೆ ನೀಡಿರುವ ನಿಗದಿತ ದಿನದೊಳಗೆ ರೈತರಿಗೆ ಪೂರ್ಣವಾಗಿ ಹಣ ಕೊಡಬೇಕು ಎಂದರು.
ಕೆ.ಆರ್.ಪೇಟೆ ಐ.ಸಿ.ಎಲ್ ಷುಗರ್ಸ್ 5,01,365 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದಾರೆ. ಎಫ್‌ಆರ್‌ಪಿಯಂತೆ ಪ್ರತಿ ಮೆಟ್ರಿಕ್ ಟನ್‌ಗೆ 2,944 ರೂ ನಿಗದಿಯಾಗಿದೆ. 14 ದಿನ ಮೀರಿ ರೈತರಿಗೆ ಪಾವತಿಸಲು 14.14 ಕೋಟಿ ರೂ ಬಾಕಿ ಇದೆ. ಕೊಪ್ಪ ಎನ್.ಎಸ್.ಎಲ್ ಷುಗರ್ಸ್ 7,43,200 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, ಪ್ರತಿ ಮೆಟ್ರಿಕ್ ಟನ್‌ಗೆ 2,920 ರೂ ನಿಗದಿಯಾಗಿದೆ. ಅದರಂತೆ 14 ದಿನ ಮೀರಿ ರೈತರಿಗೆ ಪಾವತಿಸಲು 19.21 ಕೋಟಿ ರೂ ಬಾಕಿ ಉಳಿದಿದೆ. ಕೆ.ಎಂ.ದೊಡ್ಡಿಯ ಚಾಮುಂಡೇಶ್ವರಿ ಷುಗರ್ಸ್ 8,00,725 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, ಎಫ್‌ಆರ್‌ಪಿ ಪ್ರತಿ ಮೆಟ್ರಿಕ್ ಟನ್‌ಗೆ 2,944 ರೂ ನಿಗದಿಯಾಗಿದ್ದು, 14 ದಿನ ಮೀರಿ ರೈತರಿಗೆ ಪಾವತಿಸಲು 16.30 ಕೋಟಿ ರೂ ಬಾಕಿ ಇದೆ. ಪಾಂಡವಪುರ ಎಸ್.ಎಸ್.ಕೆ ಷುಗರ್ಸ್ 5,39,575 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಎಫ್‌ಆರ್‌ಪಿ ದರದಂತೆ ಪ್ರತಿ ಮೆಟ್ರಿಕ್ ಟನ್‌ಗೆ 2,920 ರೂ ನಿಗದಿಯಾಗಿದ್ದು, 14 ದಿನ ಮೀರಿ ರೈತರಿಗೆ ಪಾವತಿಸಲು 3.83 ಕೋಟಿ ರೂ ಬಾಕಿ ಇರುತ್ತದೆ ಎಂದು ಸಂಬಂಧಿಸಿದ ಕಾರ್ಖಾನೆ ಅಧಿಕಾರಿಗಳು ಮಾಹಿತಿ ನೀಡಿದರು.
ಇನ್ನು ಮೈಷುಗರ್ ಕಾರ್ಖಾನೆಯಲ್ಲಿ 2,41,305 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಎಫ್‌ಆರ್‌ಪಿ ದರದಂತೆ ಪ್ರತಿ ಮೆಟ್ರಿಕ್ ಟನ್‌ಗೆ 2,920 ರೂ ನಿಗದಿಯಾಗಿದ್ದು, ರೈತರಿಗೆ ಹಣ ಪಾವತಿಯಲ್ಲಿ ಯಾವುದೇ ಬಾಕಿ ಉಳಿಸಿಕೊಂಡಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.