ಕಡತ ವಿಲೇವಾರಿಯಲ್ಲಿ ನಿರ್ಲಕ್ಷೃ ಸಲ್ಲ: ಜಿಲ್ಲಾಧಿಕಾರಿ ಡಾ.ಕುಮಾರ ತರಾಟೆ

DC meeting with Revenue Department officials Mandya
Published on

ಮಳವಳ್ಳಿ: ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕಡತಗಳು ಮಳವಳ್ಳಿಯಲ್ಲಿ ವಿಲೇವಾರಿ ಆಗದೇ ಬಾಕಿ ಉಳಿದಿವೆ. ಕೆಳಹಂತದ ಅಧಿಕಾರಿ ಹಾಗೂ ಸಿಬ್ಬಂದಿ ಸಮರ್ಪಕವಾಗಿ ಕೆಲಸ ನಿರ್ವಹಿಸದಿದ್ದರೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ತಹಸೀಲ್ದಾರ್ ಲೋಕೇಶ್‌ಗೆ ಜಿಲ್ಲಾಧಿಕಾರಿ ಡಾ.ಕುಮಾರ ತರಾಟೆ ತೆಗೆದುಕೊಂಡರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಸುತ್ತೋಲೆ ಮಾಹಿತಿಯನ್ನು ತಿಳಿದುಕೊಳ್ಳುವ ಸೌಜನ್ಯವಿಲ್ಲವೇ?. ಅಲ್ಲದೇ ಇನ್ನೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಏಕೆ ಲ್ಯಾಪ್‌ಟಾಪ್ ವಿತರಿಸಿಲ್ಲ. ತಾಲೂಕಿನಲ್ಲಿನ ಕಂದಾಯ ಇಲಾಖೆ ಕಡತ ವಿಲೇವಾರಿಯಲ್ಲಿ ಏಕೆ ನಿರ್ಲಕ್ಷೃ ತೋರುತ್ತಿದ್ದೀರ ಎಂದು ಪ್ರಶ್ನಿಸಿದರು.

ತಹಸೀಲ್ದಾರ್ ಲಾಗಿನ್‌ನಲ್ಲಿಯೇ ಸಾಕಷ್ಟು ಅರ್ಜಿ ವಿಲೇವಾರಿವಾಗದೇ ಉಳಿದಿವೆ. ಈಗಾದರೆ ಕೆಳ ಹಂತದವರಿಂದ ಕೆಲಸ ಮಾಡಿಸಿಕೊಳ್ಳುವುದು ಹೇಗೆ?. ಜನರ ಕೆಲಸಗಳು ಸಮರ್ಪಕವಾಗಿ ಆಗಬೇಕು. ಎಲ್ಲ ಅರ್ಜಿಗಳನ್ನು ಕೂಡಲೇ ಇ ಆಫೀಸ್‌ನಲ್ಲಿ ಎಂಟ್ರಿ ಮಾಡಬೇಕು. ಸರ್ಕಾರದ ವೇತನ ಪಡೆಯುವ ಅಧಿಕಾರಿ ಹಾಗೂ ಸಿಬ್ಬಂದಿ ಸಾರ್ವಜನಿಕ ಕೆಲಸ ಮಾಡದೇ ಕಾಲಹರಣ ಮಾಡಿದರೆ ಅನ್ನ ಕೊಡುವ ಇಲಾಖೆಗೆ ದ್ರೋಹ ಬಗೆದಂತೆ. ಕೆಲಸ ಮಾಡದಿದ್ದರೂ ನನಗೆ ಸಂಬಳ ಬರುತ್ತದೆ ಎನ್ನುವ ಮನಸ್ಥಿತಿಯನ್ನು ಮೊದಲು ಬದಲಾಯಿಸಿಕೊಳ್ಳಬೇಕು. ಕೆಲಸಗಳು ಹೇಗೆ ನಡೆಯುತ್ತಿವೆ ಎನ್ನುವುದು ಆನ್‌ಲೈನ್‌ನಲ್ಲಿ ಗೊತ್ತಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡ ಡಿಸಿ, ಆರ್‌ಟಿಸಿ ಬದಲಾವಣೆ, ಸರ್ಕಾರಿ ಜಮೀನು ರಕ್ಷಣೆ, ಅರ್ಜಿ ವಿಲೇವಾರಿಯಲ್ಲಿ ಮಳವಳ್ಳಿ ತಾಲೂಕು ಹಿಂದುಳಿದಿದೆ. ಇಲಾಖೆಯ ಕೆಲಸದಲ್ಲಿ ನಿಷ್ಠೆ ಮತ್ತು ಕಾಳಜಿ ಇಲ್ಲ. ಇದೇ ಮುಂದುವರೆದರೇ ವೇತನ ಮತ್ತು ಬಡ್ತಿಯನ್ನು ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಮಾತನಾಡಿ, ಮಳವಳ್ಳಿ ತಾಲೂಕಿನಲ್ಲಿ ಕಂದಾಯ ಇಲಾಖೆಯಲ್ಲಿ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರೇ ಸಭೆ ನಡೆಸುವಂತಾಗಿದೆ. ಆರ್‌ಐ, ಶಿರಸ್ತೇದಾರರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.

ಬಾಣಸಮುದ್ರ ಗ್ರಾಮಕ್ಕೆ ಡಿಸಿ ಭೇಟಿ

ಜಿಲ್ಲಾಧಿಕಾರಿ ಡಾ.ಕುಮಾರ ತಾಲೂಕಿನ ಬಾಣಸಮುದ್ರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ಮೂರು ಅಂಗನವಾಡಿ ಕೇಂದ್ರಗಳಿಗೂ ಸರ್ಕಾರಿ ಭೂಮಿ ಮಂಜೂರಾಗದೇ ಖಾಸಗಿ ಮನೆಗಳಲ್ಲಿ ಬಾಡಿಗೆ ಆಧಾರದ ಮೇಲೆ ಅಂಗನವಾಡಿ ನಡೆಸಲಾಗುತ್ತಿದೆ. ಒತ್ತುವರಿಯಾಗಿರುವ ಸರ್ಕಾರಿ ಭೂಮಿ ತೆರವುಗೊಳಿಸಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಹಾಗೂ ಪಶು ಆಸ್ಪತ್ರೆ ತೆರೆಯಲು ಸ್ಥಳ ನಿಗದಿಪಡಿಸಿಕೊಡುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.

ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳಿಲ್ಲ, ಶಾಲೆ ಕೊಠಡಿ ಅತ್ಯಂತ ಚಿಕ್ಕದಾಗಿದೆ. ಅಡುಗೆ ಮನೆ, ಆಟದ ಮೈದಾನ, ದಾಸ್ತಾನು ಕೊಠಡಿಗೆ ಅಗತ್ಯ ಸ್ಥಳಾವಕಾಶ ಇಲ್ಲವಾಗಿದೆ. ಪ್ರಾರ್ಥನೆ ಮಾಡಲು ಸಹ ಸೂಕ್ತ ಸ್ಥಳಾವಕಾಶವಿಲ್ಲ. ಇಲ್ಲಿಯ ಸ್ಥಳದ ಸಮಸ್ಯೆ ಸರಿಪಡಿಸಬೇಕು. ಪರಿಶೀಲನೆ ವೇಳೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಸಿದ್ಧಪಡಿಸಿರುವುದಿಲ್ಲ. ಇದಕ್ಕೆ ಕಾರಣ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ತಿಳಿಸಿದರು.

ಬಾಣಸಮುದ್ರ ತಾಲೂಕಿನ ಎರಡನೇಯ ಅತಿ ದೊಡ್ಡ ಗ್ರಾಮ. ಇಲ್ಲಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅವಶ್ಯಕತೆ ಇದೆ. ಗ್ರಾಮವು ಪಕ್ಕದ ಕದಂಪುರ, ಕೊಲ್ಲಾಪುರಕ್ಕೆ ಹೊಂದಿಕೊಂಡಿದ್ದು, ನೂರಾರು ಮಕ್ಕಳು ಪಟ್ಟಣಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಸಮರ್ಪಕ ಬಸ್ ಸೌಕರ್ಯ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸಮಯಕ್ಕೆ ಸರ್ಕಾರಿ ಬಸ್ ಕಲ್ಪಿಸುವಂತೆ ತಿಳಿಸಿದರು. ಬಾಣಸಮುದ್ರ ಗ್ರಾಮ ಲೆಕ್ಕಾಧಿಕಾರಿಗಳ ವೃತ್ತ ಆಗಿದ್ದು, ಇಲ್ಲಿಯೇ ಕಚೇರಿ ತೆರೆಯಲು ಗ್ರಾಮಸ್ಥರು ವಿನಂತಿಸಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಡಿಸಿ ತಿಳಿಸಿದರು.

ಡಿಡಿಎಲ್ ಆರ್.ವಿರೂಪಾಕ್ಷ, ತಾ.ಪಂ ಇಒ ಎಚ್.ಜಿ.ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net