

ಮಂಡ್ಯ: ಜಿಲ್ಲೆಯಲ್ಲಿ ಹೊರಗುತ್ತಿಗೆ ನೌಕರರ ಸೇವೆ ಪಡೆದು ಅವರಿಗೆ ಯಾವುದೇ ತೊಂದರೆ ಇಲ್ಲದೆ ವೇತನ ಹಾಗೂ ಇನ್ನಿತರೆ ಸೌಲಭ್ಯ ಒದಗಿಸಲು ಕಾರ್ಮಿಕ ವಿವಿದ್ದೋದೇಶ ಸೊಸೈಟಿ ಪ್ರಾರಂಭಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊರಗುತ್ತಿಗೆ ನೌಕರರಿಗೆ ಸಂಬಂಧಿಸಿದಂತೆ ಪ್ರತಿ ಮಾಹೆ 5ನೇ ತಾರೀಖಿನೊಳಗೆ ವೇತನ ಪಾವತಿಯಾಗುತ್ತಿಲ್ಲ, ಪಿಎಫ್ ನೀಡುತ್ತಿಲ್ಲ ಎಂದು ಹಲವಾರು ದೂರುಗಳು ಬರುತ್ತಲೆ ಇರುತ್ತದೆ. ಕಾರ್ಮಿಕ ವಿವಿದ್ದೋದೇಶ ಸೊಸೈಟಿ ಸ್ಥಾಪಿಸಿ ಅದರ ಮೂಲಕ ಹೊರಗುತ್ತಿಗೆ ನೌಕರರನ್ನು ಪಡೆದುಕೊಳ್ಳುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸೊಸೈಟಿ ಪ್ರಾರಂಭಿಸಲು ಜಿಲ್ಲೆಯ ಎಲ್ಲ ಇಲಾಖೆಗಳಲ್ಲಿ ಹೊರಗುತ್ತಿಗೆ ಮೂಲಕ ಪಡೆಯುವ ನೌಕರರ ವರ್ಗವಾರು ಸಂಖ್ಯೆಯನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಪಟ್ಟಿ ಮಾಡಿಕೊಳ್ಳಿ. ಅಧಿಕಾರಿಗಳು ಆದ್ಯತೆಯ ಮೇಲೆ ಕಾರ್ಮಿಕ ಇಲಾಖೆಗೆ ನಿಗದಿಪಡಿಸಿರುವ ನಮೂನೆಯಲ್ಲಿ ಮಾಹಿತಿ ಒದಗಿಸಿ. ಸೊಸೈಟಿ ಪ್ರಾರಂಭಿಸಲು ಕನಿಷ್ಟ 1000 ಸದಸ್ಯರ ನೋಂದಣಿಯಾಗಬೇಕು. ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲೇ 1000 ಜನರು ಸಿಗುತ್ತಾರೆ. ಈ ಹಿನ್ನಲೆಯಲ್ಲಿ ಬೈಲಾ ಸಿದ್ಧಪಡಿಸಿ ಸೊಸೈಟಿ ನೋಂದಣಿ ಕೆಲಸವನ್ನು ಪ್ರಾರಂಭಿಸಿ ಎಂದರು.
ನೋಂದಣಿಯಾದ ನಂತರ ಸರ್ಕಾರಕ್ಕೆ ಸೊಸೈಟಿ ಪ್ರಾರಂಭಿಸಲು ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯುವ ಕೆಲಸ ನಡೆಸಬೇಕಿದೆ. ಸೊಸೈಟಿ ಸ್ಥಾಪನೆಯಿಂದ ಹೊರಗುತ್ತಿಗೆ ನೌಕರರಿಗೆ ಆರೋಗ್ಯ ವಿಮೆ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸಬಹುದು. ಹೊರಗುತ್ತಿಗೆ ನೌಕರರಿಗೆ ಉಂಟಾಗುವ ತೊಂದರೆಗಳನ್ನು ನಿವಾರಿಸಲು ಕೆಲವು ಮಧ್ಯವರ್ತಿಗಳು ಸಂಘಗಳನ್ನು ಸ್ಥಾಪಿಸಿ ಹಣ ವಸೂಲಾತಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಹೊರಗುತ್ತಿಗೆ ನೌಕರರು ಹಣ ನೀಡಿ ಮೋಸ ಹೋಗದಂತೆ ಎಚ್ಚರಿಕೆ ನೀಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸವಿತಾ ಮಾತನಾಡಿ, ಬೈಲಾದಲ್ಲಿ ಅಧ್ಯಕ್ಷರು, ಸಹ ಅಧ್ಯಕ್ಷರು ಹಾಗೂ ಸದಸ್ಯರು ಇರುತ್ತಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾಯಣ್ಣಗೌಡ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದಿನೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಂಜುಳಾ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಮಧುಶ್ರೀ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.