

ಮಂಡ್ಯ: ರೋಗಿಗಳ ಆರೈಕೆಗಾಗಿ ಬರುವವರಿಗೆ ತಂಗಲು ಅನುಕೂಲವಾಗುವಂತೆ ಸಿಎಸ್‌ಆರ್ ಅನುದಾನ ಬಳಸಿ ಮಿಮ್ಸ್ ಆವರಣದಲ್ಲಿ ನಿರ್ಮಿಸಲಾಗಿರುವ ಆರೋಗ್ಯ ಧಾಮವನ್ನು ಸಮರ್ಪಕವಾಗಿ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಮಿಮ್ಸ್‌ನಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರೋಗ್ಯ ಧಾಮದ ಹೊಣೆಗಾರಿಕೆಯನ್ನು ನಿಭಾಯಿಸಲು ನೋಡೆಲ್ ಅಧಿಕಾರಿಗಳಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಪಿ. ಕೃಷ್ಣಕುಮಾರ್, ಉಸ್ತುವಾರಿ ಹಾಗೂ ಮೇಲ್ವಿಚರಣೆಗೆ ಮಿಮ್ಸ್‌ನ ಸ್ಥಾನೀಯ ವೈದ್ಯಾಧಿಕಾರಿ ಡಾ.ದರ್ಶನ್‌ಕುಮಾರ್ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಧಾಮದ ಸೌಲಭ್ಯದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ದಾಖಲಾತಿ ವಿಭಾಗಗಳಲ್ಲಿ ಫಲಕಗಳನ್ನು ಅಳವಡಿಸಿ. ಆಸ್ಪತ್ರೆಗೆ ದಾಖಲಾದ ರೋಗಿಗಳ ಪರವಾಗಿ ಬರುವ ಆರೈಕೆದಾರರು ಆರೋಗ್ಯ ಧಾಮದಲ್ಲಿ ತಂಗಲು ಇಚ್ಚೆಪಟ್ಟಲ್ಲಿ ದಿನಕ್ಕೆ (24 ಗಂಟೆಗಳು) 30 ರೂ ಶುಲ್ಕವನ್ನು ಪಾವತಿಸಿಕೊಂಡು ರಶೀದಿ ನೀಡಬೇಕು. ಈ ಹಣವನ್ನು ಬಳಕೆದಾರರ ನಿಧಿಗೆ ಜಮೆ ಮಾಡಬೇಕು. ಈ ಮೊತ್ತದಿಂದಲೇ ಆರೋಗ್ಯಧಾಮದ ನಿರ್ವಹಣೆ, ಸಿಬ್ಬಂದಿ ವೇತನ ಪಾವತಿಗೆ ವೆಚ್ಚ ಮಾಡಬೇಕು. ರೋಗಿಯು ಆಸ್ಪತ್ರೆಯಲ್ಲಿ ದಾಖಲಾದ ನಂತರ ನೀಡಲಾಗುವ ದಾಖಲಾತಿ ಸಂಖ್ಯೆಯ ಆಧಾರದ ಮೇಲೆ ಅವರ ಆರೈಕೆದಾರರಿಗೆ ಕಂಪ್ಯೂಟರ್ ಆಧಾರಿತ ಪಾವತಿ ಚೀಟಿಯನ್ನು ನೀಡಬೇಕು ಎಂದು ತಾಕೀತು ಮಾಡಿದರು.
ಆರೈಕೆದಾರರು ರೋಗಿಯ ದಾಖಲಾತಿ ವಿವರ, ಆರೋಗ್ಯಧಾಮಕ್ಕೆ ದಾಖಲಾದ ಆರೈಕೆದಾರರ ದಾಖಲಾತಿ ಚೀಟಿ, ಆರೈಕೆದಾರರ ಗುರುತಿನ ಚೀಟಿಯ ನಕಲು ಪ್ರತಿಯನ್ನು ನೀಡಿ ಆರೋಗ್ಯಧಾಮದಲ್ಲಿ ದಾಖಲಾಗಬೇಕು. ಆರೋಗ್ಯಧಾಮದಲ್ಲಿ ಸ್ವಚ್ಛತೆ ಕಾಪಾಡಬೇಕು. ಆರೈಕೆದಾರರು ಅನುಸರಿಸಬೇಕಾದ ನಿಯಮಗಳ ಫಲಕವನ್ನು ಅಳವಡಿಸಿ. ನಿಯಮ ಉಲ್ಲಂಘಿಸಿದವರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಆರೋಗ್ಯಧಾಮ ಮತ್ತು ದಾಖಲಾದವರ ವಿವರಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಪ್ರತಿನಿತ್ಯವೂ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿ. ಸಾಧ್ಯವಾದಷ್ಟು ಶೀಘ್ರವಾಗಿ ಆರೋಗ್ಯ ಧಾಮದ ದಾಖಲಾತಿ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುವು ಮಾಡಿ ಎಂದು ತಿಳಿಸಿದರು.
ಉಪಲೋಕಾಯುಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ನ್ಯೂನತೆಗಳನ್ನು ತಿಳಿಸಿದ್ದು, ಅವುಗಳನ್ನು ಸರಿಪಡಿಸಿಕೊಂಡು ವರದಿ ನೀಡುವಂತೆ ಈಗಾಗಲೇ ತಿಳಿಸಲಾಗಿತ್ತು. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿ ಪರಿಶೀಲಿಸಲು ಆಗಿಂದಾಗ ಭೇಟಿ ನೀಡಿ ಪರಿಶೀಲಿಸುವಂತೆ ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಅವರಿಗೆ ಸೂಚಿಸಿದರು.
ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಮಾತನಾಡಿ, ಹೊರ ರೋಗಿ ವಿಭಾಗದಲ್ಲಿ ಅಂಗವಿಕಲರು, ಪುರುಷರು, ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತಾ ಕೆಲಸಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಆರ್‌ಒ ಅಳವಡಿಕೆಯ ಕೆಲಸ ಪ್ರಗತಿಯಲ್ಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಯಪ್ರಕಾಶ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.
ಸಭೆಯ ನಂತರ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಒಪಿಡಿ ಹಾಗೂ ಔಷಧ ವಿತರಣಾ ಘಟಕಕ್ಕೆ ಭೇಟಿ ನೀಡಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ವಾಹನ ನಿಲುಗಡೆ ಸ್ಥಳಕ್ಕೆ ಭೇಟಿ ನೀಡಿ ಶುಲ್ಕ ಪಡೆಯುತ್ತಿರುವ ಬಗ್ಗೆ ವಿಚಾರಣೆ ನಡೆಸಿದರು. ಎಂಟು ಗಂಟೆಯ ಅವಧಿಗೆ 7 ರೂ ನಿಗದಿಯಾಗಿದೆ. ಆದರೆ 10 ರೂ ಚೀಟಿಗಳು ಲಭ್ಯವಿದೆ. ಇನ್ನು ಮುಂದೆ ಕಂಪ್ಯೂಟರ್ ಆಧಾರಿತ ಬಿಲ್ ನೀಡಿ ಸರಿಯಾಗಿ ನಿರ್ವಹಿಸದಿದ್ದಲ್ಲಿ ಟೆಂಡರ್ ರದ್ದು ಪಡಿಸುವುದಾಗಿ ಎಚ್ಚರಿಕೆ ನೀಡಿದರು.