

ಹಾಸನ: ಜಿಲ್ಲಾ ವಿಪತ್ತು ನಿರ್ವಹಣೆಯಲ್ಲಿ ಯಾವುದೇ ಲೋಪವಾಗದಂತೆ ನಿಗಾ ವಹಿಸಲು ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ಮೂಲಭೂತ ಸೌಕರ್ಯಗಳ ದುರಸ್ತಿಗೆ ಸರ್ಕಾರದಿಂದ ಮಂಜೂರಾಗಿ ಬಂದಿರುವ ಕಾಮಗಾರಿಗಳ ಪಟ್ಟಿಯಂತೆ ಕ್ರಮ ಕೈಗೊಂಡು ಕಾಮಗಾರಿ ಪೂರ್ಣಗೊಳಿಸಿ. ನಂತರ ಜಿಪಿಎಸ್ ಪೋಟೋದೊಂದಿಗೆ ವರದಿ ನೀಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಮಳೆಯಿಂದ ಜೀವ ಹಾನಿ, ಜಾನುವಾರು ಹಾನಿಗೆ ಸರ್ಕಾರದ ಮಾರ್ಗಸೂಚಿ ಅನ್ವಯ ಈಗಾಗಲೇ ಪರಿಹಾರವನ್ನು ನೀಡಲಾಗಿದೆ. ಆಸ್ತಿ-ಪಾಸ್ತಿ ಹಾನಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಪರಿಹಾರ ನೀಡಲಾಗುವುದು. ಮುಂಗಾರಿನಲ್ಲಿ 2024-25 ನೇ ಸಾಲಿನಲ್ಲಿ ಕಾಫಿ ಹೊರತುಪಡಿಸಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ನಷ್ಟ ಕುರಿತು ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ನಷ್ಟ ಕುರಿತು ಪರಿಹಾರ ಪೋರ್ಟಲ್‌ನಲ್ಲಿ ದಾಖಲಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಬೆಳೆ ಪರಿಹಾರ ಪೋರ್ಟಲ್‌ನಲ್ಲಿ ಪರಿಹಾರ ಲಾಗಿನ್‌ನಲ್ಲಿ ರಿಜೆಕ್ಟ್ ಆಗಿರುವ ಒಟ್ಟು 336 ಪ್ರಕರಣಗಳನ್ನು ಕುರಿತು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಡಿಬಿಟಿ ಮೂಲಕ ಬೆಳೆ ಹಾನಿ ಪರಿಹಾರ ನೀಡಲಾಗುವುದು ಎಂದು ತಿಳಿಸಿ, ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಳಕ್ಕೆ ಕಾರಣ ಏನು ಎನ್ನುವುದಕ್ಕೆ ಪರಿಶೀಲಿಸಿ ವರದಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ತಿಳಿಸಿದರು.
ಮಳೆಯಾಗುವ ವೇಳೆ ಸಿಡಿಲಿನಿಂದ ಸಾವು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು 264 ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನರಿಗೆ ಅರಿವು ಮೂಡಿಸುವಂತೆ ತಿಳಿಸಿದರು. ಕುಡಿಯುವ ನೀರಿನ ಮಾದರಿಗಳನ್ನು 15 ದಿನಕ್ಕೊಮ್ಮೆ ಪರೀಕ್ಷೆ ಮಾಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಹೇಳಿದರು.
ಶಿರಾಡಿ ಘಾಟ್ ಪ್ರದೇಶದಲ್ಲಿ ಆಯಿಲ್ ಟ್ಯಾಂಕರ್‌ಗಳು ಸಂಚರಿಸುವ ಸಂದರ್ಭದಲ್ಲಿ ಅವಘಡಗಳು ಉಂಟಾದ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ಅಗ್ನಿ ಶಾಮಕ ದಳಕ್ಕೆ ಒಂದು ಸುಸಜ್ಜಿತ ವಾಹನವನ್ನು ನೀಡಲಾಗುತ್ತಿದೆ. ಸಕಲೇಶಪುರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ವಾಹನ ನಿಲುಗಡೆಗೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಒಟ್ಟು 6869 ಕೆರೆಗಳು ಇದ್ದು, ಒತ್ತುವರಿಯಾಗಿರುವುದನ್ನು ತೆರವುಗೊಳಿಸಿ ಜಿಪಿಎಸ್ ಪೋಟೋ ಸಮೇತ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.