

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯಲ್ಲಿ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿಯ ವಿವಿಧ ಕಾಮಗಾರಿ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳ್ಳದೆ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಕಾಮಗಾರಿ ವೇಗ ಹೆಚ್ಚಿಸುವಂತೆ ಪದೇಪದೆ ಸೂಚನೆ ನೀಡಿದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ತ್ವರಿತವಾಗಿ ಎಲ್ಲ ಕಾಮಗಾರಿ ಮುಗಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾದೀತು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಹಾಗೂ ಕಾಮಗಾರಿಯ ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾ.7ರಂದು ಹಮ್ಮಿಕೊಂಡಿದ್ದ ಜಿಲ್ಲೆಯಲ್ಲಿ ಕೈಗೊಂಡಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಇಂದ್ರಾಳಿಯಲ್ಲಿ ರೈಲ್ವೆ ಮೇಲ್ಸುತುವೆ ಕಾಮಗಾರಿ 2018ರಿಂದಲೇ ಪ್ರಾರಂಭವಾಗಿದ್ದರೂ ಇನ್ನೂ ಮುಗಿದಿಲ್ಲ. ಆ ಭಾಗದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅನೇಕ ಅಪಘಾತಗಳು ಸಂಭವಿಸಿ ಸಾವು-ನೋವು ಉಂಟಾಗಿದೆ. ಸಾರ್ವಜನಿಕರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೀವು ಮಾಡುತ್ತಿರುವ ತಪ್ಪುಗಳಿಗೆ, ನಿಮ್ಮ ನಿರ್ಲಕ್ಷ್ಯಕ್ಕೆ ಜಿಲ್ಲಾಡಳಿತ, ಜಿಲ್ಲಾಧಿಕಾರಿ ಉತ್ತರಿಸಬೇಕಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ಮಾಡುತ್ತಿಲ್ಲ. ಆರು ತಿಂಗಳಿಂದ ನಾನು ನಿರಂತರ ಸಭೆ ಹಾಗೂ ಕಾಮಗಾರಿಯ ಪ್ರಗತಿ ಪರಿಶೀಲನೆ ಮಾಡುತ್ತಿದ್ದೇನೆ. ಆದರೂ ಮುಗಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠ ಡಾ. ಅರುಣಕುಮಾರ್ ಕೆ., ಸಹಾಯಕ ಕಮಿಷನರ್ ಮಹೇಶ್ಚಂದ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಶೃಂಗೇರಿ-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತ ಮಂಜುನಾಥ್, ಶಶಿಧರ್ ಜೆ. ಹಾಗೂ ವಿವಿಧ ಗುತ್ತಿಗೆದಾರರು ಇದ್ದರು.