ರಕ್ತನಿಧಿ ಕೇಂದ್ರದಲ್ಲಿನ ಸಮಸ್ಯೆ ಬಗೆಹರಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

DC Meeting with Mims Doctor Mandya
Published on

ಮಂಡ್ಯ: ಮಿಮ್ಸ್‌ನ ರಕ್ತನಿಧಿ ಕೇಂದ್ರದಲ್ಲಿ ಉಂಟಾಗಿರುವ ತೊಂದರೆ ಕೂಡಲೇ ಸರಿಪಡಿಸಬೇಕು. ಮಾತ್ರವಲ್ಲದೆ ಈ ಹಿಂದೆ ನಡೆಯುತ್ತಿದ್ದ ರೀತಿಯೇ ಮುಂದುವರೆಯಬೇಕು. ಇದಕ್ಕೆ ಸಂಬಂಧಿಸಿದಂತೆ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸುವಂತೆ ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಅವರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಿಮ್ಸ್ ವೈದ್ಯರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೋಗಿಗಳ ಜೀವ ಉಳಿಸಲು ತುರ್ತಾಗಿ ರಕ್ತ ಬೇಕಿರುತ್ತದೆ. ರಕ್ತನಿಧಿ ಕೇಂದ್ರ ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ, ರೋಗಿಗಳು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಸಹ ಎದುರಿಸಬೇಕಾಗಬಹುದು. ಆದ್ದರಿಂದ ರೋಗಿಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರಿಯಾಗಿ ಕೆಲಸ ನಿರ್ವಹಿಸಿ ಎಂದು ತಿಳಿಸಿದರು.

ಸಾರ್ವಜನಿಕರು ವೈದ್ಯರಿಗೆ ದೇವರ ಸ್ಥಾನ ನೀಡುತ್ತಾರೆ. ಆದ್ದರಿಂದ ವೈದ್ಯರು ಸ್ವಪ್ರತಿಷ್ಠೆಯಿಂದಾಗಿ ರಕ್ತನಿಧಿ ಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ರೋಗಿಗಳಿಗೆ ರಕ್ತ ದೊರಕುತ್ತಿಲ್ಲ. ರಕ್ತದಾನ ಶಿಬಿರಗಳು ಜಿಲ್ಲೆಯಲ್ಲಿ ನಡೆಯುತ್ತಿಲ್ಲ ಎಂದರೆ ತಲೆ ತಗ್ಗಿಸಬೇಕಾದ ವಿಷಯ. ಜಿಲ್ಲೆಯಲ್ಲಿ ಈ ಹಿಂದೆ ಹಲವಾರು ರಕ್ತದಾನ ಶಿಬಿರ ಆಯೋಜಿಸಿ ರಕ್ತ ಸಂಗ್ರಹಿಸಿ ಅವಶ್ಯಕವಿದ್ದಾಗ ಬೇರೆ ಜಿಲ್ಲೆಗೆ ನೀಡಲಾಗುತ್ತಿತ್ತು. ಆದರೆ ಇಂದು ಮಿಮ್ಸ್‌ಗೆ ಬರುವ ರೋಗಿಗಳು ಖಾಸಗಿ ಕೇಂದ್ರದಿಂದ ರಕ್ತ ತರಬೇಕು ಎಂದರೆ ಬಡವರಿಗೆ ಕಷ್ಟಕರವಾಗುತ್ತದೆ. ಮಿಮ್ಸ್‌ಗೆ ಬರುವ ರೋಗಿಗಳು ಬಡವರು ಎಂಬುವುದನ್ನು ಮರೆಯಬೇಡಿ. ಮಾನವೀಯತೆ ಹಾಗೂ ಹೃದಯವಂತಿಕೆಯನ್ನು ರೂಢಿಸಿಕೊಂಡು ಕೆಲಸ ನಿರ್ವಹಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ರಕ್ತನಿಧಿ ಕೇಂದ್ರ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ರಕ್ತಕ್ಕೆ ಕೃತಕ ಬೇಡಿಕೆ ಸೃಷ್ಠಿಯಾಗಿ ಹಲವಾರು ತೊಂದರೆ ಉಂಟಾಗುತ್ತದೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಮಿಮ್ಸ್‌ನ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಿ ಎಂದು ನಿರ್ದೇಶನ ನೀಡಿದರು.

ರಕ್ತನಿಧಿ ಕೇಂದ್ರದಲ್ಲಿ ರಕ್ತದ ಯೂನಿಟ್ ಹೆಚ್ಚಿಸಲು ರೆಡ್‌ಕ್ರಾಸ್ ಸಂಸ್ಥೆಯೊಂದಿಗೆ ಶಿಬಿರಗಳನ್ನು ಆಯೋಜಿಸಿ. ಪ್ರತಿದಿನ ರಕ್ತ ನಿಧಿ ಕೇಂದ್ರದ ಕಾರ್ಯನಿರ್ವಹಣೆಯನ್ನು ನಿಯಮಿತವಾಗಿ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಅವರು ಪರಿಶೀಲನೆ ನಡೆಸಬೇಕು. ರಕ್ತನಿಧಿ ಕೇಂದ್ರಕ್ಕೆ ಸಂಬಂಧಿಸಿದಂತೆ ಪುನ: ದೂರುಗಳು ಕೇಳಿಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಕೆ.ಟಿ.ಹನುಮಂತು, ಮಹಮದ್ ರಫಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net