

ಕಲಬುರಗಿ: ಮಹಾನಗರ ಪಾಲಿಕೆ ವ್ಯಾಪ್ತಿಯ ಬಡಾವಣೆಗಳಿಗೆ ನಿಗದಿಪಡಿಸಿದ ವೇಳಾಪಟ್ಟಿಯಂತೆ ಕುಡಿಯುವ ನೀರು ಪೂರೈಕೆಯಾಗಬೇಕು. ನಲ್ಲಿ ಮೂಲಕ ನೀರು ಸರಬರಾಜು ಮಾಡಲು ಸಾಧ್ಯವಾಗದಿದ್ದಲ್ಲಿ ಟ್ಯಾಂಕರ್‌ನೊಂದಿಗೆ ಪೂರೈಕೆ ಮಾಡುವುದು ಪಾಲಿಕೆ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ, ಕೆಯುಐಡಿಎಫ್‌ಸಿ, ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಅವರು, ಬೇಸಿಗೆ ಜತೆಗೆ ಹಬ್ಬಗಳ ಸಮಯ ಇದಾಗಿದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ನೀರು ಪೂರೈಕೆ ಮಾಡದಿದ್ದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಇದನ್ನರಿತು ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.
ಕಲಬುರಗಿ ನಗರದ ವಾರ್ಡ್ ೧೪, ೧೫, ೩೧, ೩೨, ೪೭, ೪೮ ಸೇರಿ ಒಟ್ಟಾರೆ ೧೧ ವಾರ್ಡ್ಗಳಲ್ಲಿ ವೇಳಾಪಟ್ಟಿ ಪ್ರಕಾರ ನೀರು ಸರಬರಾಜು ಮಾಡುತ್ತಿಲ್ಲ ಎಂಬುದು ಸಾರ್ವಜನಿಕರ ದೂರು. ನೀರು ಬಿಡುಗಡೆ ಮಾಡುವ ವೇಳಾಪಟ್ಟಿಯನ್ನು ಸಾರ್ವಜನಿಕರಿಗೆ ಮೊದಲೇ ತಿಳಿಸಬೇಕು. ಅದರಂತೆ ನೀರು ಪೂರೈಸಬೇಕು ಎಂದು ಸೂಚನೆ ನೀಡಿದರು.
ಬೆಂಗಳೂರಿನಲ್ಲಿ ಇತ್ತೀಚಿಗೆ ಕಲುಷಿತ ನೀರು ಸೇವನೆಯಿಂದ ಕಾಲರಾ ಪ್ರಕರಣ ಬೆಳಕಿಗೆ ಬರುತ್ತಿದ್ದು, ಕಲಬುರಗಿಯಲ್ಲಿ ಅದು ಮರುಕಳಿಸದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಶುದ್ಧೀಕರಣಗೊಂಡ ನೀರು ಮಾತ್ರ ಪೂರೈಸಬೇಕು. ಶುದ್ಧೀಕರಣ ಘಟಕಕ್ಕೆ ಅಧಿಕಾರಿಗಳು ಆಗಾಗ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಪರಿಶೀಲಿಸಬೇಕು ಎಂದರು.
ಕುರಿಕೋಟಾ ಇನ್‌ಟೇಕ್‌ನಲ್ಲಿ ಲೀಕೇಜ್ ಕಾರಣ ನಗರಕ್ಕೆ ಕಾಲಮಿತಿಯಲ್ಲಿ ನೀರು ಪೂರೈಕೆ ಮಾಡಲು ಆಗುತ್ತಿಲ್ಲ ಎಂಬ ಪಾಲಿಕೆ ಅಧಿಕಾರಿಗಳು ಡಿಸಿ ಗಮನಕ್ಕೆ ತಂದರು. ಪ್ರತಿಕ್ರಿಯಿಸಿದ ಡಿಸಿ, ಶನಿವಾರದೊಳಗೆ ಲೀಕೇಜ್ ದುರಸ್ತಿ ಮಾಡಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ.ಜಾಧವ, ಕೆಯುಐಎಫ್‌ಡಿಸಿ ಕಾರ್ಯನಿರ್ವಾಹಕ ಅಭಿಯಂತ ಅಹ್ಮದ್ ಹುಸೇನ್, ಎಲ್ ಆ್ಯಂಡ್ ಟಿ ಕಂಪನಿಯ ಟೀಮ್ ಲೀಡರ್ ಕುಮಾರೇಶ, ಸ್ನೆಕ್ ಕನ್ಸಲ್‌ಟೆನ್ಸಿಯ ರಂಗಧಾಮ ಇತರರಿದ್ದರು.
ಭೀಕರ ಬರ ಎದುರಾಗಿದೆ. ಎಲ್ಲೆಡೆ ನೀರಿನ ಸಮಸ್ಯೆ ಕಂಡುಬರುತ್ತಿದ್ದು, ಸಾರ್ವಜನಿಕರು ಕುಡಿಯುವ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು. ಅವಶ್ಯಕತೆ ಅನುಗುಣವಾಗಿ ನೀರು ಬಳಸಬೇಕು. ಜೀವನಕ್ಕೆ ಜೀವ ಜಲ ತುಂಬಾ ಅವಶ್ಯಕ, ಇದನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸಬೇಕು.
| ಬಿ.ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ