

ಮಂಡ್ಯ: ಎನ್‌ಡಿಆರ್‌ಎಫ್‌ಗೆ ನಿಯಮದಂತೆ ಜಿಲ್ಲೆಗೆ ಬರ ಪರಿಹಾರ ನೀಡಲು ಭತ್ತ, ರಾಗಿ, ಜೋಳ ಮತ್ತು ನೆಲಗಡಲೆ ಬೆಳೆಗಳು ನಿಗದಿಯಾಗಿದೆ. ಇನ್ನು ರೈತರ ಮನವಿಯಂತೆ ಕಬ್ಬು ಹಾಗೂ ತೆಂಗು ಬೆಳೆಯನ್ನು ಸೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೈತರೊಂದಿಗೆ ಆಯೋಜಿಸಿದ್ದ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆ.ಆರ್.ಎಸ್‌ನಿಂದ ಬೆಳೆಗಳಿಗೆ ನೀರು ಬಿಡುಗಡೆ ಮಾಡಲು ನೀರಾವರಿ ಸಲಹಾ ಸಮಿತಿ ನಡೆಸಿ ರೈತರಿಗೆ ಮಾಹಿತಿ ನೀಡಿ ಬಿಡುಗಡೆ ಮಾಡಲಾಗುವುದು. ನೀರು ಬಿಡುಗಡೆಯ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಅಥವಾ ಯಾವುದೇ ಕಾಮಗಾರಿಗಳಿದ್ದಲ್ಲಿ ನಿಲುಗಡೆ ಮಾಡಿ ನೀರು ಬಿಡುಗಡೆ ಮಾಡಲಾಗುವುದು. ಈ ಬಗ್ಗೆ ರೈತರಿಗೆ ಆತಂಕ ಬೇಡ ಎಂದರು.
ಜಿಲ್ಲೆಗೆ 90,000 ಮೆಟ್ರಿಕ್‌ಟನ್ ರಸಗೊಬ್ಬರ ಬೇಕಿದ್ದು, ಈಗಾಗಲೇ 55,000 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇರುತ್ತದೆ. ಬೇಡಿಕೆ ಅನುಸಾರ ಉಳಿದ ರಸಗೊಬ್ಬರ ತರಿಸಿಕೊಳ್ಳಲಾಗುವುದು. ಇನ್ನು 540 ಪರವಾನಗಿ ಹೊಂದಿರುವ ರಸಗೊಬ್ಬರ ಮಾರಾಟಗಾರರಿದ್ದು, ಅವರಿಗೆ ರಸಗೊಬ್ಬರಗಳ ದರ ಹಾಗೂ ದಾಸ್ತಾನು ವಿವರವನ್ನು ಅನಾವರಣಗೊಳಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕಳೆದ ಸಾಲಿನಲ್ಲಿ ಸರ್ವೇ ನಡೆಸಿದ ಸಂದರ್ಭದಲ್ಲಿ ಮೃತ ರೈತರ ಹೆಸರಿನಲ್ಲೇ ಭೂಮಿ ಇರುವುದು ಕಂಡು ಬಂದ ಹಿನ್ನಲೆ 22 ಸಾವಿರ ಪ್ರಕರಣಗಳನ್ನು ಪತ್ತೆ ಮಾಡಿ ಪೌತಿ ಖಾತೆ ಆಂದೋಲನ ನಡೆಸಿ ಸುಮಾರು 17,800 ಪೌತಿ ಖಾತೆ ಮಾಡಲಾಗಿದೆ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಯಲ್ಲಿದ್ದ 11,800 ಪ್ರಕರಣಗಳಲ್ಲಿ 9,700 ಪ್ರಕರಣ ವಿಲೇವಾರಿ ಮಾಡಲಾಗಿದೆ. ಕಂದಾಯ ಇಲಾಖೆ ಹಂತ ಹಂತವಾಗಿ ರೈತರ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ಸೆಸ್ಕ್‌ಗೆ ಸಂಬಂಧಿಸಿದಂತೆ ಹಲವಾರು ರೈತರಿಂದ ದೂರು ಬಂದ ಹಿನ್ನಲೆಯಲ್ಲಿ ಜೂ.8ರಂದು ರೈತರ ಕುಂದು ಕೊರತೆ ಸಭೆ ನಡೆಸುವಂತೆ ಅಧೀಕ್ಷಕ ಇಂಜಿನಿಯರ್ ಸೂಚಿಸಿದರು.
ಇನ್ನು ಕೃಷಿ, ತೋಟಗಾರಿಕೆ ಇಲಾಖೆಯಿಂದ ದೊರಕುವ ಸೌಲಭ್ಯ, ಕೃಷಿ ಪದ್ಧತಿಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಕಾರ್ಯಾಗಾರ ನಡೆಸುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದ ಡಿಸಿ, ತಾಲೂಕು ಮಟ್ಟದಲ್ಲಿ ರೈತರ ಕುಂದು ಕೊರತೆ ಸಭೆ ನಡೆಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಎರಡು ತಾಲೂಕಿನಲ್ಲಿ ಮಾತ್ರ ಸಭೆ ನಡೆಸಿದ್ದು, ಉಳಿದೆಡೆಯೂ ಆಗಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸ್ಿ ಮಾತನಾಡಿ, ಜಿಪಂನಿಂದ ಈಗಾಗಲೇ 80 ಕಲ್ಯಾಣಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಲ್ಯಾಣಿಗಳ ಅಭಿವೃದ್ಧಿಗಳಿಸಲು ಯೋಜನೆ ರೂಪಿಸಲಾಗುವುದು. ಹೂಳು ತಗೆಯುವ ಕೆಲಸದ ಮೇಲುಸ್ತುವಾರಿ ವಹಿಸಿ. ರೈತರು ಕೆರೆಗಳಿಂದ ಹೂಳು ತೆಗೆಯಲು ಅನುಮತಿ ನೀಡಿದ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ರೈತರು ವೈಜ್ಞಾನಿಕವಾಗಿ ಹೂಳು ತೆಗೆಯುವಂತೆ ಮೇಲುಸ್ತುವಾರಿ ವಹಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಪೌತಿ ಖಾತೆಗೆ ನಾಡ ಕಚೇರಿಗೆ ಹೋಗಿ ಆನ್‌ಲೈನ್ ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ತಮ್ಮ ಕೆಲಸ ಆಗುತ್ತದೆ. ಯಾವುದೇ ಗ್ರಾಮ ಲೆಕ್ಕಾಧಿಕಾರಿಗಳನ್ನು ಹುಡುಕಿಕೊಂಡು ಹೋಗಬೇಡಿ ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಮಾತನಾಡಿ, ಜಿಲ್ಲೆಯಲ್ಲಿ ಬಿತ್ತನೆ ಬೀಜದ ಕೊರತೆ ಇಲ್ಲ. ರೈತರ ಬೇಡಿಕೆ ಅನುಗುಣವಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಹಸಿರೆಲೆ ಗೊಬ್ಬರದ ಬೀಜಗಳ ಬೇಡಿಕೆ ಹೆಚ್ಚಿದ್ದು, ಎರಡು ದಿನಗಳಲ್ಲಿ 1,800 ಕ್ವಿಂಟಾಲ್ ದಾಸ್ತಾನು ಆಗಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಮಹೇಶ್, ಕಾವೇರಿ ನೀರಾವರಿ ನಿಗಮ ನಿಯಮಿತದ ಅಧೀಕ್ಷಕ ಇಂಜಿನಿಯರ್ ರಘುರಾಂ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ರೈತ ಮುಖಂಡರಾದ ಸುನಂದಾ ಜಯರಾಂ, ಕೆ.ಬೋರಯ್ಯ, ಕೆಂಪೂಗೌಡ ಇತರರಿದ್ದರು.