ಭತ್ತ, ರಾಗಿ ಕಟಾವಿಗೆ ದರ ಫಿಕ್ಸ್: ಡಿಸಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಸಭೆ

DC meeting with farmers and officials Mandya
Published on

ಮಂಡ್ಯ: ಜಿಲ್ಲೆಯಲ್ಲಿ ಭತ್ತ, ರಾಗಿ ಬೆಳೆಯನ್ನು ಯಂತ್ರದ ಮೂಲಕ ಕಟಾವು ಮಾಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಆಯೋಜಿಸಿದ ಸಭೆಯಲ್ಲಿ ಬಾಡಿಗೆ ದರ ನಿಗದಿ ಮಾಡಲಾಯಿತು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ರೈತರು ಹಾಗೂ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ದರ ನಿಗದಿ ಕುರಿತಂತೆ ಚರ್ಚೆ ನಡೆಸಲಾಯಿತು. ಅಂತಿಮವಾಗಿ 2024-25 ನೇ ಸಾಲಿಗೆ ದರ ನಿಗದಿಪಡಿಸಿದರು. ಅದರಂತೆ ಚೈನ್ ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 2,500 ರೂಗಳು, ಟೈಯರ್(ಗ್ರೀಪ್) ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 2 ಸಾವಿರ ರೂ, ಟೈಯರ್(ಸಾಮಾನ್ಯ) ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 1,800 ರೂ ಹಾಗೂ ರಾಗಿ ಯಂತ್ರಕ್ಕೆ ಪ್ರತಿ ಗಂಟೆಗೆ 2,900 ರೂ ನಿಗದಿ ಮಾಡಲಾಯಿತು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಯಂತ್ರಗಳ ಮೂಲಕ ಭತ್ತ ಹಾಗೂ ರಾಗಿ ಬೆಳೆಗಳ ಕಟಾವಿನ ಬಾಡಿಗೆ ದರ ನಿಗದಿಯ ಬಗ್ಗೆ ರೈತರಿಗೆ ತಿಳಿಯುವಂತೆ ಹೆಚ್ಚು ಪ್ರಚಾರ ಮಾಡಬೇಕು. ಜಿಲ್ಲೆಯಲ್ಲಿ 2024-25 ನೇ ಸಾಲಿನ ಮುಂಗಾರು ಹಂಗಾಮಿನ ಭತ್ತ ಬೆಳೆಯ 57,804 ಹೆಕ್ಟೇರ್ ವಿಸ್ತೀರ್ಣ ಹಾಗೂ ರಾಗಿ ಬೆಳೆ 54,018 ಹೆಕ್ಟೇರ್ ಹಾಗೂ ಕಬ್ಬು ಬೆಳೆಯ ವಿಸ್ತೀರ್ಣವು 40,361 ಹೆಕ್ಟೇರ್ ಇದೆ ಎಂದರು.

ಕರ್ನಾಟಕ ರೈತ ಸುರಕ್ಷಾ-ಪ್ರಧಾನ ಮಂತ್ರಿ ಬಿಮಾ ಯೋಜನೆಯು ಅತಿವೃಷ್ಟಿ/ಅನಾವೃಷ್ಟಿ, ಅಕಾಲಿಕ ಮಳೆ ಮುಂತಾದ ಪ್ರಕೃತಿ ವಿಕೋಪಗಳು ಸೇರಿದಂತೆ ಹಲವು ಕಾರಣಗಳಿಂದ ಬೆಳ ನಷ್ಟ ಸಂಭವಿಸಿದ್ದರೆ ರೈತರಿಗೆ ಪರಿಹಾರ ನೀಡುವ ಮೂಲಕ ಭದ್ರತೆ ಒದಗಿಸಲಾಗುವುದು. ಇದರಿಂದ ರೈತರಿಗೆ ಕೃಷಿಯಲ್ಲಿ ಆಧುನಿಕ ಬೇಸಾಯ ಪದ್ಧತಿಯನ್ನು ಹೆಚ್ಚಿನ ಬೆಲೆ ಪರಿಕರಗಳನ್ನು ಹಾಗೂ ಉನ್ನತ ಮಟ್ಟದ ತಂತ್ರಜ್ಞಾನವನ್ನು ಅಳವಡಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.

ವಿಮಾ ಯೋಜನೆಯು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಿಂಗಾರು ಹಂಗಾಮಿಗೆ ಮದ್ದೂರು, ಮಂಡ್ಯ, ನಾಗಮಂಗಲ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಅಧಿಸೂಚಿತ ಗ್ರಾಪಂನಲ್ಲಿ ಹುರುಳಿ(ಮಳೆಯಾಶ್ರಿತ) ಬೆಳೆಗೆ ನೋಂದಾಯಿಸಬಹುದಾಗಿರುತ್ತದೆ. ಬೇಸಿಗೆ ಹಂಗಾಮಿಗೆ ಮಂಡ್ಯ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಅಧಿಸೂಚಿತ ಗ್ರಾಪಂನಲ್ಲಿ ಭತ್ತ(ನೀರಾವರಿ) ಬೆಳೆಗೆ ನೋಂದಣಿ ಮಾಡಿಕೊಳ್ಳಬಹುದು. ಹೋಬಳಿ ಮಟ್ಟದಲ್ಲಿ ಹಿಂಗಾರು ಹಂಗಾಮಿಗೆ ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವಪುರ, ಕೆ.ಆರ್.ಪೇಟೆ, ನಾಗಮಂಗಲ ಅಧಿಸೂಚಿತ ಹೋಬಳಿಯಲ್ಲಿ ಭತ್ತ(ನೀರಾವರಿ), ರಾಗಿ (ನೀರಾವರಿ), ರಾಗಿ(ಮಳೆಯಾಶ್ರಿತ) ಮತ್ತು ಹುರುಳಿ(ಮಳೆಯಾಶ್ರಿತ) ಬೆಳೆಗೆ ಹಾಗೂ ಪಾಂಡವಪುರ ತಾಲೂಕಿನ ಚಿನಕುರಳಿ, ಮೇಲುಕೋಟೆ ಮತ್ತು ಕಸಬಾ ಹೋಬಳಿಯಲ್ಲಿ ಟಮೋಟ, ಬೇಸಿಗೆ ಹಂಗಾಮಿಗೆ ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವಪುರ, ಕೆ. ಆರ್.ಪೇಟೆ, ನಾಗಮಂಗಲ ಅಧಿಸೂಚಿತ ಹೋಬಳಿಯಲ್ಲಿ ಭತ್ತ(ನೀರಾವರಿ) ಮತ್ತು ರಾಗಿ(ನೀರಾವರಿ) ಬೆಳೆ ನೋಂದಣಿ ಮಾಡಿಸಲು ಅವಕಾಶವಿದೆ ಎಂದು ವಿವರಿಸಿದರು.

2024-25 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಲ್ಲಿ ನೀರಿನ ಮಿತ ಬಳಕೆ ಹಾಗೂ ಲಭ್ಯವಿರುವ ನೀರನ್ನು ಸಮರ್ಥ ಬಳಕೆ ಮಾಡುವಲ್ಲಿ ಅನುವಾಗುವಂತೆ ತುಂತುರು ಹಾಗೂ ಹನಿ ನೀರಾವರಿ ಘಟಕ ಅಳವಡಿಸಿಕೊಳ್ಳಬಹುದು. ಸಣ್ಣ/ಅತಿ ಸಣ್ಣ ರೈತರಿಗೆ ಗರಿಷ್ಟ ಎರಡು ಹೆಕ್ಟರ್ ಪ್ರದೇಶದವರೆಗೆ ಶೇ.90ರಷ್ಟು ಸಹಾಯಧನ ನೀಡಲಾಗುವುದು. ಎರಡು ಹೆಕ್ಟರ್ ಮೇಲ್ಪಟ್ಟ ದೊಡ್ಡ ರೈತರಿಗೆ ಶೇ.45ರಷ್ಟು ಸಹಾಯಧನ ಸಿಗಲಿದೆ. ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಎಲ್ಲ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೃಷಿ ಇಲಾಖೆ ಒದಗಿಸುವಂತೆ ತಿಳಿಸಿದೆ.

ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net