ಕೈಗಾರಿಕೆಗಳಿಗೆ ಅವಶ್ಯ ತರಬೇತಿ ನೀಡಿ:ಡಿಸಿ ನಲಿನ್ ಸೂಚನೆ

DC MEETING WITH ENTREPRENEURS KOPPAL SKILL DEVELOPMENT VTU
ಕುಕನೂರು ತಾಲೂಕಿನ ತಳಕಲ್‌ನಲ್ಲಿ ಬುಧವಾರ ಡಿಸಿ ನಲಿನ್ ಅತುಲ್ ಅಧ್ಯಕ್ಷತೆಯಲ್ಲಿ ಕೈಗಾರಿಕೋದ್ಯಮಿಗಳ ಸಭೆ ಜರುಗಿತು. ರಾಜ್ಯ ಕೌಶಲಾಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣಕುಮಾರ, ವಿಟಿಯು ಉಪಕುಲಪತಿ ಡಾ.ವಿದ್ಯಾಶಂಕರ್, ರಿಜಿಸ್ಟ್ರಾರ್ ಡಾ.ರಂಗಸ್ವಾಮಿ ಬಿ.ಎಸ್.,ವಿಟಿಯು ಬೆಂಗಳೂರಿನ ನಿರ್ದೇಶಕಿ ಡಾ.ಸಂಧ್ಯಾ ಇದ್ದರು.
Published on

ಕೊಪ್ಪಳ: ನಮ್ಮ ಭಾಗದಲ್ಲಿನ ಕೈಗಾರಿಕೆಗಳಿಗೆ ಅವಶ್ಯವಿರುವ ಮಾನವ ಸಂಪನ್ಮೂಲ ಒದಗಿಸಲು ಯುವಕರಿಗೆ ಅಗತ್ಯ ಕೌಶಲ ತರಬೇತಿ ನೀಡುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.

ಕುಕನೂರು ತಾಲೂಕಿನ ತಳಕಲ್ ಕೌಶಲಾಭಿವೃದ್ಧಿ ಕೇಂದ್ರದಲ್ಲಿ ಕೈಗಾರಿಕೆಗಳ ಮುಖ್ಯಸ್ಥರೊಂದಿಗೆ ಬುಧವಾರ ಆಯೋಜಿಸಿದ್ದ ಸಭೆ ಉದ್ದೇಶಿಸಿ ಮಾತನಾಡಿದರು.

ಕೈಗಾರಿಕೆಗಳಲ್ಲಿ ಶಿಷ್ಯವೃತ್ತಿ (ಅಪ್ರೆಂಟಿಶಿಪ್) ಕಾರ್ಯಕ್ರಮ ಕಡ್ಡಾಯವಾಗಿ ಅನುಷ್ಠಾನ ಮಾಡಿ. ಇದರಿಂದ ಯುವಕರಿಗೆ ಕೈಗಾರಿಕೆಗಳಲ್ಲಿನ ಕೆಲಸದ ವೈಖರಿ ಮತ್ತು ಕೆಲಸಕ್ಕೆ ಬೇಕಾದ ಕೌಶಲ ಕಲಿಯಲು ಅನುಕೂಲವಾಗಲಿದೆ. ವಿಟಿಯು ಕೌಶಲ ತರಬೇತಿ ಕೇಂದ್ರದಿಂದ 17ತರಬೇತಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಇದರಿಂದ ಕೈಗಾರಿಕೆಗಳಿಗೆ ಬೇಕಾಗುವ ಮಾನವ ಸಂಪನ್ಮೂಲಗಳ ಪೂರೈಕೆಗೆ ಸಹಕಾರಿಯಾಗಿದೆ. ಕಾರ್ಖಾನೆಗಳು ತಮಗೆ ಅವಶ್ಯ ಇರುವ ಕೌಶಲ ತರಬೇತಿ ಬಗ್ಗೆ ಮಾಹಿತಿ ನೀಡಿದಲ್ಲಿ, ಬೇಡಿಕೆಗೆ ಅನುಗುಣವಾಗಿ ತಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸಹಾಯವಾಗಲಿದೆ. ಹೀಗಾಗಿ ನಿಮ್ಮ ಬೇಡಿಕೆ ಸಲ್ಲಿಸಿ ಎಂದು ಸೂಚಿಸಿದರು.

ರಾಜ್ಯ ಕೌಶಲಾಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣಕುಮಾರ ಮಾತನಾಡಿ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ತರಬೇತಿ ಅನುಷ್ಠಾನಗೊಳಿಸಲಾಗುತ್ತಿದೆ. ಉದ್ಯೋಗಿಗಳ ಪೂರೈಕೆ ಹಾಗೂ ಬೇಡಿಕೆಯ ಅಂತರ ಹಾಗೂ ಕೊರತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗಾರಿಕೆಗಳ ಸಹಕಾರ ಅಗತ್ಯ.

ನಿಗಮದಲ್ಲಿ ಕೈಗಾರಿಕಾ ಸಂಪರ್ಕ ಕೋಶ ರಚಿಸಿದ್ದು, ನಿಮ್ಮ ಅಗತ್ಯತೆ ಪೂರೈಸಲಿದೆ. ಸಂಬಂಧಿಸಿದ ಕಾರ್ಖಾನೆಯವರೇ ಮಾನ್ಯತೆ ಪಡೆದು ಅಲ್ಪಾವಧಿ ವೃತ್ತಿಪರ ಕೌಶಲಾಭಿವೃದ್ಧಿ ಕಾರ್ಯಕ್ರಮ ನಡೆಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರಾಣೇಶ್, ಇಲಾಖೆಯಿಂದ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ತರಬೇತಿ ಕಾರ್ಯಕ್ರಮಗಳ ವಿವರ ಹಂಚಿಕೊಂಡರು.

ತಳಕಲ್ ವಿಟಿಯು ತರಬೇತಿ ಕೇಂದ್ರದ ವಿಶೇಷಾಧಿಕಾರಿ ಡಾ.ಬಸವರಾಜ, ತರಬೇತಿ ಕೇಂದ್ರ ಹೊಂದಿರುವ ಮೂಲ ಸೌಕರ್ಯ ಹಾಗೂ ಕೇಂದ್ರ ಅನುಷ್ಠಾನಗೊಳಿಸುತ್ತಿರುವ ತರಬೇತಿ ವಿವರಿಸಿದರು.

ವಿಟಿಯು ಉಪಕುಲಪತಿ ಡಾ.ವಿದ್ಯಾಶಂಕರ್, ರಿಜಿಸ್ಟ್ರಾರ್ ಡಾ.ರಂಗಸ್ವಾಮಿ ಬಿ.ಎಸ್., ಬೆಂಗಳೂರಿನ ಎನ್‌ಎಟಿಎಸ್‌ನ ಸಂಯೋಜಕ ರಾಹುಲ್, ವಿಟಿಯು ಬೆಂಗಳೂರಿನ ನಿರ್ದೇಶಕಿ ಡಾ.ಸಂಧ್ಯಾ, ಕೆ.ಎಸ್.ಡಿ.ಸಿ. ಎಂಡಿ ಹೇಮಂತ,

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಹಾಗೂ ವಿವಿಧ ಜಿಲ್ಲೆಗಳ 25ಕ್ಕೂ ಹೆಚ್ಚು ಕೈಗಾರಿಕೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net