

ಮಂಡ್ಯ: ಜಿಲ್ಲೆಯಲ್ಲಿ ಪಟಾಕಿ ಅಂಗಡಿಗಳನ್ನು ತೆರೆಯಲು ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ರಚಿಸಲಾಗಿರುವ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪಟಾಕಿ ಅಂಗಡಿ ಅನುಮತಿ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನ.11 ರಿಂದ 14 ರವರೆಗೆ ತಾತ್ಕಾಲಿಕವಾಗಿ ಪಟಾಕಿ ಅಂಗಡಿ ತೆರೆಯಲು ಸಮಿತಿ ಸ್ಥಳ ನಿಗದಿ ಮಾಡಲಿದೆ. ಅಂತೆಯೇ ಸೂಚನೆ ನೀಡಿರುವ ಸ್ಥಳದಲ್ಲಿ ಮಾತ್ರ ಅಂಗಡಿ ತೆರೆಯಲು ಅರ್ಜಿ ಪರಿಶೀಲಿಸಿ ಅವಕಾಶ ನೀಡಲಾಗುವುದು. ಶಾಶ್ವತವಾಗಿ ಕಾರ್ಯನಿರ್ವಹಿಸುತ್ತಿರುವ ಪಟಾಕಿ ಅಂಗಡಿಗಳನ್ನು ಸಮಿತಿ ಪರಿಶೀಲಿಸಿ ಷರತ್ತು ಪೂರೈಸಿರುವ ಬಗ್ಗೆ ಪರಿಶೀಲಿಸಿ ವರದಿ ನೀಡಲಿದೆ. ಒಂದು ವೇಳೆ ಅನಧಿಕೃತವಾಗಿ ರಸ್ತೆ ಬದಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಪಟಾಕಿ ಮಾರಾಟ ಮಾಡುವುದು ಕಂಡು ಬಂದಲ್ಲಿ ನಿಯಮಾನುಸಾರ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಂಗಡಿ ತೆರೆಯಲು ಸಮಿತಿಯಿಂದ ಅನುಮತಿ ಪಡೆಯುವವರೂ ಎಲ್ಲ ಷರತ್ತುಗಳನ್ನು ಪೂರೈಸಬೇಕು. ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗುವುದು. ಪ್ರಮುಖವಾಗಿ ಪಟಾಕಿ ಮಾರಾಟದ ದರಗಳನ್ನು ಅನಾವರಣಗೊಳಿಸಬೇಕು. ಅಂಗಡಿಯಲ್ಲಿ ಅಡುಗೆ ಹಾಗೂ ಧೂಮಪಾನ ಮಾಡುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಜತೆಗೆ ಮುನ್ನೆಚ್ಚೆರಿಕಾ ಕ್ರಮವಾಗಿ ಅಂಗಡಿ ಅವರು ಸಾವಿರ ಲೀಟರ್ ನೀರು, ಸ್ಯಾಂಡ್ ಬ್ಯಾಗ್, ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಯ ನಡುವೆ ಅಂತರ, ಒಳಗೆ ಹಾಗೂ ಹೊರಗೆ ತೆರಳಲು ಸ್ಥಳಾವಕಾಶ ಇರಬೇಕು. ಇವುಗಳನ್ನು ಸಮಿತಿ ಅವರು ಪರಿಶೀಲಿಸಿ ವರದಿ ನೀಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಮಂಡ್ಯ ಎಸಿ ಶಿವಮೂರ್ತಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ.ಪಿ.ಗುರುರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಸೇರಿದಂತೆ ಪಟಾಕಿ ಮಾರಾಟಗಾರರು ಇದ್ದರು.