ಸಾಲಕ್ಕೆ ಹೊಂದಾಣಿಕೆ ಮಾಡುವಂತಿಲ್ಲ: ಜಿಲ್ಲಾಧಿಕಾರಿ ಡಾ.ಕುಮಾರ ಕಟ್ಟುನಿಟ್ಟಿನ ಸೂಚನೆ

DC meeting with bank officials Mandya
Published on

ಮಂಡ್ಯ: ರೈತರಿಗೆ ಸರ್ಕಾರ ಬಿಡುಗಡೆ ಮಾಡುವ ಬರ ಪರಿಹಾರದ ಹಣವನ್ನು ಬ್ಯಾಂಕ್ ಅಧಿಕಾರಿಗಳು ಯಾವುದೇ ಸಾಲಕ್ಕೆ ಹೊಂದಾಣಿಕೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ತೀವ್ರ ಬರದಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳು ರೈತರ ಬರ ಪರಿಹಾರ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡದಂತೆ ಈಗಾಗಲೇ ಸೂಕ್ತ ನಿರ್ದೇಶನ ನೀಡಲಾಗಿದೆ. ಒಂದು ವೇಳೆ ಸಾಲಕ್ಕೆ ಹೊಂದಾಣಿಕೆ ಮಾಡಿಕೊಂಡಿದ್ದರೆ, ಅದನ್ನು ರೈತರ ಖಾತೆಗೆ ಹಿಂದಿರುಗಿಸಿ. ಮತ್ತೆ ಈ ಬಗ್ಗೆ ದೂರು ಬರದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಕಳೆದ ಸಾಲಿನಲ್ಲಿ ಪ್ರಾಣಿ ದಾಳಿಯಿಂದ ಉಂಟಾದ ಬೆಳೆ ನಷ್ಟ ಕುರಿತಂತೆ 568 ಪ್ರಕರಣ ವರದಿಯಾಗಿದೆ. ಇವುಗಳಿಗೆ ಪಾವತಿಯಾಗಿರುವ ಪರಿಹಾರ ಕುರಿತಂತೆ ವರದಿ ನೀಡಬೇಕು. ಮಳೆ, ಗಾಳಿಯಿಂದ ಮರದ ಕೊಂಬೆಗಳು ವಿದ್ಯುತ್ ಸಂಪರ್ಕ ಲೈನ್ ಮೇಲೆ ಬೀಳುತ್ತಿದ್ದು, ವಿದ್ಯುತ್ ಅಡಚಣೆ ಉಂಟಾಗುತ್ತಿದೆ ಎಂದು ದೂರುಗಳು ಬರುತ್ತಿದೆ. ಆದ್ದರಿಂದ ತೊಂದರೆ ಉಂಟು ಮಾಡುವ ಮರದ ಕೊಂಬೆಗಳನ್ನು ತೆರವುಗೊಳಿಸಿ. ಅಂತೆಯೇ ಮಳೆ, ಗಾಳಿಯಿಂದ ವಿದ್ಯುತ್ ಕಂಬಗಳು ಬಿದ್ದಲ್ಲಿ ಅದಷ್ಟು ಬೇಗ ಅಂದರೆ 24 ಗಂಟೆಯೊಳಗಾಗಿ ಸರಿಪಡಿಸಿ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಮಂಡ್ಯ ಉಪವಿಭಾಗಾಧಿಕಾರಿ ಮಹೇಶ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕೃಷ್ಣಕುಮಾರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್‌ಕುಮಾರ್, ಅರಣ್ಯ ಇಲಾಖೆಯ ಅಧಿಕಾರಿ ಶಿಲ್ಪಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಸುರೇಶ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net