ರೈತರಿಗೆ ಅನುಕೂಲವಾಗುವಂತೆ ಸಾಲದ ಪ್ರಮಾಣ ಹೆಚ್ಚಳ: ಡಿಸಿ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಣಯ

DC meeting with bank officials mandya
Published on

ಮಂಡ್ಯ: ಜಿಲ್ಲೆಯಲ್ಲಿ ರೈತರು ಆರ್ಥಿಕವಾಗಿ ಸದೃಢರಾಗಲು ದುಡಿಯುವ ಬಂಡವಾಳದ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಂಗಳವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2024-25ನೇ ಸಾಲಿನಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಹಾಗೂ ರಾಷ್ಟ್ರೀಯ ಬ್ಯಾಂಕ್‌ನಿಂದ ನೀಡಲಾಗುವ ಬೆಳೆಸಾಲ ಮತ್ತು ಕೃಷಿ ಪೂರಕ ಚಟುವಟಿಕೆಗಳಾದ ಪಶುಸಂಗೋಪನೆ, ಮೀನುಗಾರಿಕೆ ಉದ್ಯಮಕ್ಕೆ ಘಟಕವಾರು ಸಾಲದ ಪ್ರಮಾಣ ನಿಗದಿಪಡಿಸಬೇಕು ಎಂದು ಸೂಚನೆ ನೀಡಿದರು.

ಭತ್ತ, ರಾಗಿ, ಕಬ್ಬು ಹೊರತುಪಡಿಸಿ ಇನ್ನುಳಿದ ಬೆಳೆಗಳಿಗೆ ಕಳೆದ ಸಾಲಿಗಿಂತ ನೀಡಲಾಗುವ ಸಾಲದ ಪ್ರಮಾಣವನ್ನು ಶೇ.5ರಷ್ಟು ಹೆಚ್ಚುವರಿ ಮಾಡಬೇಕು. ನಿಗದಿಪಡಿಸಿರುವ ಸಾಲದ ಪ್ರಮಾಣವು ಗರಿಷ್ಟ ಮೊತ್ತವಾಗಿರುತ್ತದೆ. ರೈತರು ಸಾಲದ ಬಂಡವಾಳವನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ನೀಡಲಾಗುವ ಉದ್ದೇಶಕ್ಕೆ ಸಾಲವನ್ನು ಉಪಯೋಗಿಸಿಕೊಂಡು ಮರುಪಾವತಿ ಮಾಡಿ ಎಂದು ಮನವಿ ಮಾಡಿದರು.

ಸಾಲಕ್ಕೆ ಸಂಬಂಧಿಸಿದಂತೆ ಹಲವು ಹೊತ್ತ ಚರ್ಚೆ ಮಾಡಲಾಯಿತು. ಅದರಂತೆ ಜಿಲ್ಲೆಯಲ್ಲಿ ಭತ್ತ, ರಾಗಿ ಮತ್ತು ಕಬ್ಬು ಬೆಳೆಯುವ ರೈತರ ಸಂಖ್ಯೆ ಹೆಚ್ಚಿದೆ. ಇವರಿಗೆ ನೀಡಲಾಗುವ ಸಾಲದ ಪ್ರಮಾಣ ಹೆಚ್ಚಿಸಬೇಕು. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. 2023-24ನೇ ಸಾಲಿನಲ್ಲಿ ಪ್ರತಿ ಎಕರೆಗೆ 1ನೇ ಬೆಳೆ ಕಬ್ಬು ಬೆಳೆಗೆ 85 ಸಾವರ ರೂ, ಕೂಳೆ ಕಬ್ಬಿಗೆ 75 ಸಾವಿರ ರೂ ನಿಗದಿಪಡಿಸಲಾಗಿತ್ತು. 2024-25ನೇ ಸಾಲಿನಲ್ಲಿ ಸಾಲದ ಪ್ರಮಾಣ ಹೆಚ್ಚಳ ಮಾಡಲಾಗಿದ್ದು, ಪ್ರತಿ ಎಕರೆಗೆ 1ನೇ ಬೆಳೆ ಕಬ್ಬು ಬೆಳೆಗೆ 95 ಸಾವಿರ ರೂ ಹಾಗೂ ಕೂಳೆ ಕಬ್ಬಿಗೆ 80 ಸಾವಿರ ರೂಗಳನ್ನು ಸಭೆಯಲ್ಲಿ ನಿಗದಿಪಡಿಸಲಾಯಿತು.

ಇನ್ನು 2023-24ನೇ ಸಾಲಿನಲ್ಲಿ ಪ್ರತಿ ಎಕರೆಗೆ ಮಳೆಯಾಶ್ರಿತ ಭತ್ತಕ್ಕೆ 40 ಸಾವಿರ ರೂ, ನೀರಾವರಿ ಭತ್ತಕ್ಕೆ 52 ಸಾವಿರ ರೂ ನಿಗದಿಪಡಿಸಲಾಗಿತ್ತು. 2024-25ನೇ ಸಾಲಿನಲ್ಲಿ ಸಾಲದ ಪ್ರಮಾಣ ಹೆಚ್ಚಳ ಮಾಡಲಾಯಿತು. ಅದರಂತೆ ಪ್ರತಿ ಎಕರೆಗೆ ಮಳೆಯಾಶ್ರಿತ ಭತ್ತಕ್ಕೆ 45 ಸಾವಿರ ರೂ, ನೀರಾವರಿ ಭತ್ತಕ್ಕೆ 55 ಸಾವಿರ ರೂಗೆ ಏರಿಕೆ ಮಾಡಲಾಯಿತು. ಅಂತೆಯೇ 2023-24ನೇ ಸಾಲಿನಲ್ಲಿ ಪ್ರತಿ ಎಕರೆಗೆ ಮಳೆಯಾಶ್ರಿತ ರಾಗಿಗೆ 32 ಸಾವಿರ ರೂ, ನೀರಾವರಿ ರಾಗಿಗೆ 37 ಸಾವಿರ ರೂ ನಿಗದಿಪಡಿಸಲಾಗಿತ್ತು. 2024-25ನೇ ಸಾಲಿನಲ್ಲಿ ಸಾಲದ ಪ್ರಮಾಣ ಹೆಚ್ಚಳ ಮಾಡುವ ಮೂಲಕ ಪ್ರತಿ ಎಕರೆಗೆ ಮಳೆಯಾಶ್ರಿತ ರಾಗಿಗೆ 35 ಸಾವಿರ ರೂ ಹಾಗೂ ನೀರಾವರಿ ರಾಗಿಗೆ 40 ಸಾವಿರ ರೂಗಳನ್ನು ಸಭೆಯಲ್ಲಿ ನಿಗದಿ ಮಾಡಲಾಯಿತು.

ಸಭೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಕಾರ್ಯನಿರ್ವಾಹಕ ಅಧಿಕಾರಿ ವನಜಾಕ್ಷಿ, ಪ್ರಧಾನ ವ್ಯವಸ್ಥಾಪಕಿ ರೂಪಶ್ರೀ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಹರ್ಷಿತಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್‌ಕುಮಾರ್, ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಶ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net