ಜಿಲ್ಲೆಯಲ್ಲಿ ಅತಿವೃಷ್ಟಿ ಹಾನಿಗಳಿಗೆ ತ್ವರಿತ ಪರಿಹಾರ

udp-15-dc
Published on

ಉಡುಪಿ: ಜಿಲ್ಲೆಯಲ್ಲಿ ಅತಿವೃಷ್ಟಿ, ನೈಸರ್ಗಿಕ ವಿಕೋಪಗಳು ಉಂಟಾದಾಗ ಕೂಡಲೇ ಸ್ಪಂದಿಸಿ, ಹಾನಿಗೊಳಗಾದವರಿಗೆ ನಷ್ಟ ಪರಿಹಾರ ತ್ವರಿತವಾಗಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ ನೀಡಿದರು.

ಮಂಗಳವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಪ್ರಸ್ತುತ ವರ್ಷದಲ್ಲಿ ಈವರೆಗೆ ವಾಡಿಕೆ ಮಳೆ 1959 ಮಿ.ಮೀ. ಇದ್ದರೂ 2803 ಮಿ.ಮೀ. ಮಳೆಯಾಗಿದ್ದು, ಶೇ. 43 ರಷ್ಟು ಹೆಚ್ಚಳವಾಗಿದೆ. ಮುಂಬರುವ ದಿನಗಳಲ್ಲಿಯೂ ಸಹ ಹೆಚ್ಚು ಮಳೆಯಾಗಬಹುದೆಂಬ ಮುನ್ಸೂಚನೆಯನ್ನು ಈಗಾಗಲೇ ಹವಾಮಾನ ಇಲಾಖೆಯವರು ನೀಡಿದ್ದಾರೆ. ಹವಾಮಾನ ಇಲಾಖೆ ಪ್ರತಿದಿನವೂ ನೀಡುವ ಮುನ್ಸೂಚನೆಗಳನ್ನು ಸಾರ್ವಜನಿಕರಿಗೆ ಹಾಗೂ ಮೀನುಗಾರರಿಗೆ ಮಾಹಿತಿ ನೀಡಬೇಕು. ಇದರಿಂದ ಮಾನವ ಜೀವಹಾನಿ ಹಾಗೂ ಪ್ರಾಣಿಗಳ ಜೀವಹಾನಿಯನ್ನು ತಪ್ಪಿಸಲು ಸಾಧ್ಯ ಎಂದರು.

ಹೆಚ್ಚಿನ ಮಳೆಯಿಂದಾಗಿ ರಾಜ್ಯಹೆದ್ದಾರಿ 9.8 ಕಿ.ಮೀ., ಜಿಲ್ಲಾ ಮುಖ್ಯ ರಸ್ತೆಗಳು 15 ಕಿ.ಮೀ ಹಾಗೂ 904.70 ಕಿ.ಮೀ ನಷ್ಟು ಗ್ರಾಮೀಣ ರಸ್ತೆಗಳು ಸೇರಿದಂತೆ 24 ಸೇತುವೆಗಳು ಹಾಳಾಗಿವೆ. 30 ಕ್ಕೂ ಹೆಚ್ಚು ಶಾಲೆ, ಅಂಗನವಾಡಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಕಟ್ಟಡಗಳು ಹಾನಿ ಉಂಟಾಗಿವೆ. ಇವುಗಳ ದುರಸ್ತಿಗೆ ಅಂದಾಜು ನಷ್ಟ ಕ್ರೋಢಿಕರಿಸಿ ನೀಡಬೇಕೆಂದರು.

ಬಜೆ ಡ್ಯಾಂ ವರದಿಗೆ ಸೂಚನೆ

ಸ್ವರ್ಣಾ ನದಿಗೆ ಬಜೆ ಹತ್ತಿರ ನಿರ್ಮಿಸಲಾಗಿರುವ ಡ್ಯಾಂ ನಲ್ಲಿ ಬಿರುಕು ಉಂಟಾಗಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿಬರುತ್ತಿದೆ. ಕೂಡಲೇ ಈ ಬಗ್ಗೆ ಪರಿಶೀಲನೆ ಮಾಡಿ, ವರದಿ ನೀಡಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕಾಲುಸಂಕಗಳ ನಿಮಾರ್ಣ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ಈಗಾಗಲೇ 5 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಸಂಬಂಧ ಟೆಂಡರ್​ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​ ಮಾತನಾಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಡಾ. ಉದಯ್​ ಕುಮಾರ್​ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಮಟ್ಟದ ಅಧಿಕಾರಿಗಳು ವೀಡಿಯೋ ಕಾನ್ಫ್​ರೆನ್ಸ್​ ಮೂಲಕ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net