

ಮಂಡ್ಯ: ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಮತಗಟ್ಟೆ ಅಧಿಕಾರಿ ಪ್ರತಿ ಮನೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ನಿಖರ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರ ಪಟ್ಟಿ ಪರಿಷ್ಕರಣೆ ಸಂಬಂಧ ಸೋಮವಾರ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿಯ ಪಟ್ಟಿ ಪರಿಷ್ಕರಣೆ ವಿಶೇಷವಾಗಿದೆ. ಜು.21 ರಿಂದ ಆ.21ರವರೆಗೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಪ್ರತಿಯೊಬ್ಬ ಮತದಾರರ ಮಾಹಿತಿ ಪಡೆಯಲಿದ್ದಾರೆ. ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗಬೇಕಿರುವವರ ವಿವರ ಕೊಟ್ಟರೆ ಕ್ರಮ ವಹಿಸುತ್ತಾರೆ. ಅಂತೆಯೇ ಕುಟುಂಬದಲ್ಲಿ ಯಾರಾದಾರೂ ಮೃತಪಟ್ಟಿದ್ದರೆ ಅವರ ಮಾಹಿತಿಯನ್ನು ಒದಗಿಸಿದರೆ ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು ಎಂದರು.
ಇದಲ್ಲದೇ ಈ ಬಾರಿ ಇ-ಜನ್ಮ ಆ್ಯಪ್‌ನಿಂದ ಜಿಲ್ಲೆಯಲ್ಲಿ ಮೃತಪಟ್ಟಿರುವವರ ಮರಣ ಪ್ರಮಾಣ ಪತ್ರವನ್ನು ಪಡೆಯಲಾಗಿದೆ. ಅದರ ಆಧಾರದ ಮೇಲೂ ಸಹ ಮತದಾರರ ಪಟ್ಟಿಯಿಂದ ಮರಣ ಹೊಂದಿರುವವ ಹೆಸರನ್ನು ಕೈಬಿಡಲಾಗುವುದು. ಅಧಿಕಾರಿಗಳು ಮತದಾರರ ಗುರುತಿನ ಚೀಟಿಯಲ್ಲಿ ಹೆಸರು ತಪ್ಪಾಗಿದ್ದಾರೆ, ಭಾವಚಿತ್ರ ಹಳೆಯದಾಗಿದ್ದಾರೆ ಅವುಗಳನ್ನು ಸಹ ಪರಿಷ್ಕರಿಸಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಿಖರ ಮಾಹಿತಿ ನೀಡಬೇಕು. ಕುಟುಂಬದಲ್ಲಿ ಒಂದೇ ವಿಳಾಸದಲ್ಲಿ ವಾಸವಿರುವ ಸದಸ್ಯರ ಹೆಸರು ಬೇರೆ ಮತಗಟ್ಟೆಗಳಲ್ಲಿದ್ದರೆ, ಅವುಗಳನ್ನು ಒಂದೇ ಮತಗಟ್ಟೆಗೆ ಸೇರಿಸುವ ಕೆಲಸ ಸಹ ಮಾಡಲಿದ್ದಾರೆ. ಕರಡು ಮತದಾರರ ಪಟ್ಟಿಯನ್ನು ಅ.17 ರಂದು ಪ್ರಕಟಿಸಲಾಗುವುದು ಎಂದರು.
ಕೆಲ ಮತಗಟ್ಟೆಗಳಲ್ಲಿ ಮತದಾನದ ಸಂದರ್ಭದಲ್ಲಿ ಮೂಲ ಸೌಕರ್ಯಗಳಿಲ್ಲ. ಮತದಾನ ಮಾಡಲು ಮತದಾರರಿಗೆ ಮತಗಟ್ಟೆ ದೂರವಾಗಿದೆ ಎಂಬ ಮಾತುಗಳು ಕೇಳಿ ಬರುತ್ತದೆ. ಈ ಹಿನ್ನೆಲೆಯಲ್ಲಿ ಹಾಲಿ ಇರುವ ಮತಗಟ್ಟೆಯನ್ನು ಸ್ಥಳಾಂತರ ಮಾಡಬೇಕಿದ್ದರೆ, ಅವುಗಳ ವಿವರವನ್ನು ಸಹ ಕ್ರೋಡಿಕರಿಸಲಾಗುವುದು. 1500ಕ್ಕೂ ಹೆಚ್ಚು ಮತದಾರರಿದ್ದಲ್ಲಿ ಅಲ್ಲಿ ಇನ್ನೊಂದು ಮತಗಟ್ಟೆಯ ಅವಶ್ಯಕತೆಯ ಬಗ್ಗೆ ಸಹ ಪರಿಶೀಲಿಸಲಾಗುವುದು. ಇದಕ್ಕಾಗಿ ರಾಜಕೀಯ ಪಕ್ಷದವರು ಪ್ರತಿ ಮತಗಟ್ಟೆಗೆ ಬೂತ್ ಲೆವಲ್ ಏಜೆಂಟ್ ನೇಮಕ ಮಾಡಿ ಅವರ ವಿವರವನ್ನು ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಗೆ ಒದಗಿಸಬೇಕು. ಆ.18 ರಿಂದ 27 ರವರಗೆ ಮತಯಂತ್ರಗಳ ಫಸ್ಟ್ ಲೆವಲ್ ಚೆಕ್ಕಿಂಗ್‌ನ್ನು ರಾಜಕೀಯ ಪಕ್ಷಗಳ ಸಮಕ್ಷಮದಲ್ಲಿ ನಡೆಸಲಾಗುವುದು. ಇದಕ್ಕದಾಗಿ ಈಗಾಗಲೇ 20 ಜನ ಬಿಇಎಲ್ ಇಂಜಿನಿಯರ್‌ಗಳನ್ನು ನೇಮಕ ಮಾಡಲಾಗಿದೆ. ರಾಜಕೀಯ ಪಕ್ಷದವರಿಗೆ ಹಾಜರಾಗಲು ಗುರುತಿನ ಚೀಟಿ ನೀಡಲಾಗುವುದು ಎಂದು ವಿವರಿಸಿದರು.
ಸಭೆಯಲ್ಲಿ ಚುನಾವಣಾ ಶಾಖೆಯ ವರದರಾಜ್, ದೀಪಕ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ, ವಿವಿಧ ಪಕ್ಷಗಳ ಮುಖಂಡರಾದ ಎಂ.ಬಿ.ರಮೇಶ್, ದಿನೇಶ್, ನವೀನ್‌ಕುಮಾರ್, ಮಂಜುನಾಥ್ ಉಪಸ್ಥಿತರಿದ್ದರು.