ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸಿತಾಣಕ್ಕೆ ಸೌಲಭ್ಯ ಅಗತ್ಯ: ಸಭೆಯಲ್ಲಿ ಕೇಳಿಬಂದವು ಮಹತ್ವದ ಸಲಹೆಗಳು

DC meeting regarding tourism development mandya
Published on

ಮಂಡ್ಯ: ಜಿಲ್ಲೆಯ ಪ್ರವಾಸಿತಾಣಕ್ಕೆ ಸಾರ್ವಜನಿಕರನ್ನು ಆಕರ್ಷಣೆ ಮಾಡಲು ಮೂಲ ಸೌಕರ್ಯಗಳನ್ನು ಒದಗಿಸಬೇಕು. ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಈ ಹಿನ್ನೆಲೆಯಲ್ಲಿ ಲಭ್ಯವಿರುವ ಅನುದಾನದಲ್ಲಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಚಿಂತಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಸಮಗ್ರ ಪ್ರವಾಸೋದ್ಯಮ ಅಭಿವೃದ್ದಿ ಕುರಿತು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಅನೇಕ ಪಾರಂಪರಿಕ, ಐತಿಹಾಸಿಕ, ಸಾಂಸ್ಕೃತಿಕ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತದಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಪರಿಣಿತ ವ್ಯಕ್ತಿಗಳಿಂದ ವಿವರ ಪಡೆಯಲಾಗುತ್ತಿದೆ ಎಂದರು.

ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳನ್ನೊಳಗೊಂಡ ವೆಬ್‌ಸೈಟ್, ಭೂಪಟ, ಟೂರಿಸ್ಟ್ ಮಾಹಿತಿಯ ಪಾಕೆಟ್ ಡೈರಿ, ಪ್ರವಾಸಿ ತಾಣದ ಒಂದು ನಿಮಿಷ ವಿಡಿಯೋ, ಬೆಂಗಳೂರು-ಮೈಸೂರು ರಾಷ್ಟೀಯ ಹೆದ್ದಾರಿಯಲ್ಲಿ ಪ್ರೇಕ್ಷಣೀಯ ಸ್ಥಳಗಳ ಫಲಕಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಚೋಳರು, ಹೊಯ್ಸಳರು, ಗಂಗರು, ಹೀಗೆ ಅನೇಕ ಅರಸರುಗಳು ಕಟ್ಟಿದ ಅನೇಕ ಪ್ರೇಕ್ಷಣೀಯ ಯಾತ್ರಾ ಸ್ಥಳಗಳು ಇದ್ದು, ಅವುಗಳನ್ನು ಪುನರ್ ಚೇತನ ಮಾಡಿದರೆ ಜಿಲ್ಲೆಯ ಸಮಗ್ರ ಪ್ರವಾಸೋದ್ಯಮ ಅಭಿವೃದ್ದಿ ಮಾಡಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ನರೇಗಾ ಯೋಜನೆಯಡಿ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ನರೇಗಾ ಯೋಜನೆಯಲ್ಲಿ ಸೇರಿಸಬಹುದಾದ ಕಾಮಗಾರಿಗಳ ಬಗ್ಗೆ ಚಿಂತಿಸಲಾಗುವುದು. ಅನೇಕ ಪ್ರವಾಸಿ ತಾಣಗಳಲ್ಲಿ ಆಹಾರ ಒದಗಿಸಲು, ವಾಹನ ನಿಲುಗಡೆ ಶುಲ್ಕ ಸಂಗ್ರಹಿಸಲು, ಪ್ರವಾಸಿ ತಾಣದ ಮಾಹಿತಿ ನೀಡುವ ಗೈಡ್‌ಗಳಾಗಿ ಕಾರ್ಯನಿರ್ವಹಿಸಲು, ಸ್ವಚ್ಛತೆಗೆ ಸಂಬಂಧಸಿದಂತೆ ಸ್ಥಳೀಯ ಮಹಿಳಾ ಸಂಘಗಳಿಗೆ ಅವಕಾಶ ನೀಡಲು ಯೋಜನೆ ಸಿದ್ಧಪಡಿಸಲಾಗುವುದು ಎಂದು ವಿವರಿಸಿದರು.

ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎಚ್.ಬಿ.ರಾಘವೇಂದ್ರ, ಜಿಲ್ಲಾ ವಾರ್ತಾಧಿಕಾರಿ ಎಚ್.ಎಸ್.ನಿರ್ಮಲಾ, ಹಿರಿಯ ಸಾಹಿತಿಗಳಾದ ತೈಲೂರು ವೆಂಕಟಕೃಷ್ಣ, ಪ್ರೊ.ಶಿವರಾಂ, ಡಾ.ಪುಷ್ಪಾ ಇತರರಿದ್ದರು.

ಜಿಲ್ಲಾಡಳಿತಕ್ಕೆ ಕೇಳಿಬಂದ ಸಲಹೆಗಳು: ಸಭೆಯಲ್ಲಿ ಭಾಗವಹಿಸಿದ್ದ ಹಲವರು ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು. ಅದರಂತೆ ಮಳವಳ್ಳಿ ತಾಲೂಕು ಚುಕ್ಕಿಮನೆ ಹೋಂಸ್ಟೇ ಮಾಲೀಕ ಸಂಜಯ್ ಶಂಕರಪ್ಪ, ಪ್ರವಾಸಿ ಸ್ಥಳಗಳಲ್ಲಿ ಉತ್ತಮ ಮಾಹಿತಿವುಳ್ಳ ಗೈಡ್‌ಗಳ ಅವಶ್ಯಕತೆ ಇದೆ. ಅವರಿಗೆ ಆಂಗ್ಲ ಸೇರಿದಂತೆ ವಿವಿಧ ಭಾಷೆಗಳ ಬಗ್ಗೆ ತಿಳಿದಿರಬೇಕು. ಮಂಡ್ಯ ಕೃಷಿ ಆಧಾರಿತ ಜಿಲ್ಲೆಯಾಗಿದ್ದು, ಅಗ್ರಿ ಟೂರಿಸಂಗೆ ಚಿಂತಿಸಬಹುದು ಎಂದು ಸಲಹೆ ನೀಡಿದರು.

ಪಾರಂಪರಿಕ ಸಂರಕ್ಷಣಾ ಉತ್ಸಾಹಿ ಸ್ವಾಮಿನಾಥನ್ ನಟರಾಜನ್ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಜಿಲ್ಲೆಯ ಪ್ರವಾಸೋದ್ಯಮದ ಬಗ್ಗೆ ಮಾಹಿತಿ ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ರೀತಿ ಭಾವಚಿತ್ರ ಹಾಗೂ ವಿಡಿಯೋಗಳನ್ನು ಅಪ್‌ಲೋಡ್ ಮಾಡಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಪರಿಸರ ಪ್ರೇಮಿ ಸಣ್ಣಸ್ವಾಮಿಗೌಡ ಮಾತನಾಡಿ, ಕೆ.ಆರ್.ಪೇಟೆಯ ಅಂಬಿಗರಹಳ್ಳಿಯಲ್ಲಿರುವ ತ್ರಿವೇಣಿ ಸಂಗಮದಲ್ಲಿ ಜಲ ಕ್ರೀಡೆಗೆ ಹೆಚ್ಚಿನ ಅವಕಾಶಗಳಿವೆ. ವೇಣುಗೋಪಾಲಸ್ವಾಮಿ, ಭೂವರಹನಾಥಸ್ವಾಮಿ ಸೇರಿದಂತೆ ಹಲವು ದೇವಸ್ಥಾನವಿದೆ. ಆದರೆ ಅಲ್ಲಿಗೆ ಬಸ್ ಸೌಲಭ್ಯದ ಅವಶ್ಯಕತೆ ಇದೆ. ಯಾತ್ರಿ ನಿವಾಸಿಗಳನ್ನು ಖಾಸಗಿ ಸಂಸ್ಥೆ ಸಹಯೋಗದಲ್ಲಿ ನಿರ್ವಹಣೆ ಮಾಡುವುದು ಉತ್ತಮ ಎಂದರು.

ಇತಿಹಾಸ ಸಂಶೋಧಕ ಮಹಮ್ಮದ್ ಖಲೀಂ ಉಲ್ಲಾ ಅವರು, ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಪಠ್ಯದಲ್ಲಿ ಓದುವ ಚೋಳರು, ಹೊಯ್ಸಳರ ಕಾಲದ ಸ್ಮಾರಕಗಳಿವೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳುವಾಗ ಮೊದಲು ಜಿಲ್ಲೆಯ ಪ್ರವಾಸ ಕೈಗೊಳ್ಳಬೇಕು ಎಂದು ಹೇಳಿದರು.

ಶ್ರೀರಂಗಪಟ್ಟಣದ ಗಣಂಗೂರು ನಂಜೇಗೌಡ ಮಾತನಾಡಿ, ಶ್ರೀರಂಗಪಟ್ಟಣದಲ್ಲಿ ಧಾರ್ಮಿಕ, ಪಾರಂಪರಿಕ ಹಾಗೂ ನೈಸರ್ಗಿಕವಾಗಿ ಆಕರ್ಷಿಸುವ ಸ್ಥಳಗಳಿವೆ. ಅಲ್ಲಿ ಒಂದು ದಿನದ ಪ್ರವಾಸ ಕೈಗೊಳ್ಳುವ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡಿ ಟೂರ್ ಪ್ಯಾಕೇಜ್ ನೀಡಬಹುದು. ಬಹಳಷ್ಟು ಪಾರಂಪರಿಕ ಸ್ಥಳಗಳು ನಶಿಸಿ ಹೋಗುವ ಹಂತ ತಲುಪಿದ್ದು, ಅವುಗಳ ಸಂರಕ್ಷಣೆಯಾಗಬೇಕು ಎಂದು ಭಾವಚಿತ್ರ ಸಮೇತ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net