ರಸ್ತೆ ಸುರಕ್ಷತೆ ಸಂಬಂಧ ತಜ್ಞರು ತ್ವರಿತವಾಗಿ ವರದಿ ಸಲ್ಲಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

DC meeting regarding road safety mandya
Published on

ಮಂಡ್ಯ: ಜಿಲ್ಲೆಯಲ್ಲಿ ರಸ್ತೆ ಡುಬ್ಬಗಳಿರುವ ಪೈಕಿ ಕೆಲವೆಡೆ ಎಚ್ಚರಿಕೆ ಫಲಕ ಅಳವಡಿಸಿಲ್ಲ. ಪರಿಣಾಮ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದ್ದು, ಅನಾಹುತ ಸಂಭವಿಸುತ್ತಿವೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ರಸ್ತೆ ಸಂಚಾರ ಸುರಕ್ಷಿತ ಕ್ರಮ, ನಾಲೆ ಹಾಗೂ ಕೆರೆಗಳ ಬದಿಯಲ್ಲಿ ತಡೆಗೋಡೆ ನಿರ್ಮಿಸುವ ಸಂಬಂಧ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತ್ವರಿತವಾಗಿ ಪೊಲೀಸರು, ಪ್ರಾದೇಶಿಕ ಸಾರಿಗೆ ಹಾಗೂ ಲೋಕೋಪಯೋಗಿ ಅಧಿಕಾರಿಗಳು ರಸ್ತೆ ಡುಬ್ಬಗಳ ಬಗ್ಗೆ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿತ್ತು. ಅದರಂತೆ ಅಪಘಾತ ಹೆಚ್ಚು ಉಂಟಾಗುವ ಸ್ಥಳಗಳಲ್ಲಿ ಡುಬ್ಬ ನಿರ್ಮಾಣ, ಸಂಚಾರ ನಿಯಮಗಳ ಎಚ್ಚರಿಕೆ ಫಲಕಗಳ ಅಳವಡಿಕೆ, ತಡೆಗೋಡೆ ನಿರ್ಮಾಣ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸಮಿತಿ ವರದಿ ನೀಡಿದೆ. ಇದನ್ನು ತಾಂತ್ರಿಕ ತಜ್ಞರು ಪರಿಶೀಲಿಸಿ ಸಂಪೂರ್ಣ ವರದಿ ನೀಡಬೇಕಿದೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. ಅದನ್ನು ತಡೆಗಟ್ಟಲು ವರದಿಯನ್ನು ತ್ವರಿತವಾಗಿ ಸಿದ್ದಪಡಿಸಿ. ವಾಹನ ಸವಾರರಿಗೆ ಗೋಚರಿಸುವಂತೆ ಸಂಚಾರ ನಿಯಮಗಳ ಜಾಗೃತಿ ಫಲಕ ಅಳವಡಿಸಬೇಕು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ವಿಶ್ವೇಶ್ವರಯ್ಯ ನಾಲಾ ವ್ಯಾಪ್ತಿಯಲ್ಲಿ ಅಪಘಾತ ಹೆಚ್ಚುತ್ತಿದೆ. ಅದನ್ನು ತಡೆಗಟ್ಟಲು ತಾಂತ್ರಿಕಾ ವರದಿಯೊಂದಿಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಶಿವಳ್ಳಿ, ಗಾಮನಹಳ್ಳಿ ಹಾಗೂ ಬನಘಟ್ಟದಲ್ಲಿ ನಾಲೆ ದುರಂತ ಸಂಭವಿಸಿ 11 ಜನ ಮೃತಪಟ್ಟಿದ್ದಾರೆ. ಆದ್ದರಿಂದ ಅಪಘಾತ ತಡೆಗಟ್ಟಲು ಜಿಲ್ಲಾ ವ್ಯಾಪ್ತಿಯ ನಾಲೆ, ಕೆರೆಗಳ ಬದಿಗಳಲ್ಲಿ ತಡೆಗೋಡೆ ಬ್ಯಾರಿಯರ್ ನಿರ್ಮಿಸಿ ನಿರ್ವಹಣೆ ಮಾಡಲು ಸಮಿತಿ ರಚಿಸಲಾಗಿತ್ತು. ಸಮಿತಿಯು ತಡೆಗೋಡೆ ನಿರ್ಮಾಣ ಸಂಬಂಧಿಸಿದಂತೆ ವರದಿ ಸಲ್ಲಿಸಿದೆ ಎಂದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಹರ್ಷ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಸಿದ್ದೇಗೌಡ, ಸಿ.ಶಂಕರ್, ಎಂ.ಶಿವಕುಮಾರ್, ನಂದಕುಮಾರ್, ಮನೋಜ್, ರಾಕೇಶ್, ಹನುಮಂತ, ವಿಜಯಕುಮಾರ್, ಮನುಕುಮಾರ್, ಸಿಂಚನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net