ಜಿಲ್ಲೆಯಲ್ಲಿ ಭತ್ತ ಖರೀದಿಗೆ ನ.15ರಿಂದ ನೋಂದಣಿ, ಡಿ.1ರಿಂದ ಖರೀದಿ: ರೈತರು ಒದಗಿಸಬೇಕಿರುವ ದಾಖಲೆಗಳಿವು

DC meeting regarding Paddy purchase mandya
Published on

ಮಂಡ್ಯ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ರೈತರು ಬೆಳೆದ ಭತ್ತವನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ನ.15ರಿಂದ ನೋಂದಣಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ ತಾಲೂಕಿನಲ್ಲಿ 6, ಮದ್ದೂರಿನಲ್ಲಿ 6, ಮಳವಳ್ಳಿಯಲ್ಲಿ 4, ಕೆ.ಆರ್.ಪೇಟೆಯಲ್ಲಿ 6, ಪಾಂಡವಪುರದಲ್ಲಿ 4, ಶ್ರೀರಂಗಪಟ್ಟಣದಲ್ಲಿ 4 ಹಾಗೂ ನಾಗಮಂಗಲ ತಾಲೂಕಿನಲ್ಲಿ 2 ಸೇರಿದಂತೆ ಒಟ್ಟು 32 ನೋಂದಣಿ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದರು.

ನೋಂದಣಿ ಕೇಂದ್ರಗಳನ್ನು ನಿಗದಿತ ಸಮಯಕ್ಕೆ ತೆರೆಯಬೇಕು. ಮಾತ್ರವಲ್ಲದೆ ಕೇಂದ್ರದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳು ಕ್ರಮಬದ್ಧವಾಗಿ ಆಗಬೇಕು. ಬರುವ ರೈತರೊಂದಿಗೆ ಸೌಜನ್ಯವಾಗಿ ವರ್ತಿಸಬೇಕು. ರೈತರು ಫ್ರೂಟ್ ಐ.ಡಿ, ಆಧಾರ್ ಕಾರ್ಡ್ ಜೋಡಣೆ ಮಾಡಿದ ಮತ್ತು ಎನ್‌ಪಿಸಿಐ ಆಕ್ಟಿವ್ ಇರುವ ಬ್ಯಾಂಕ್ ಖಾತೆ ಪುಸ್ತಕದ ಪ್ರತಿ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ಹಾಜರುಪಡಿಸಿ ಹೆಸರು ನೋಂದಾಯಿಸಿಕೊಳ್ಳುವುದು ಎಂದು ಹೇಳಿದರು.

ಡಿ.1ರಿಂದ ಭತ್ತ ಖರೀದಿ: ನೋಂದಣಿ ಮಾಡಿಕೊಂಡ ರೈತರಿಂದ ಡಿ.1ರಿಂದ ಮಾ.31ರವರೆಗೆ ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್ಗೆ 2,183 ರೂ, ಎ ಗ್ರೇಡ್ ಭತ್ತಕ್ಕೆ ಕ್ವಿಂಟಾಲ್ಗೆ 2,203 ರೂನಂತೆ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ನೀಡಿ ಖರೀದಿಸಲಾಗುವುದು. ಪ್ರಮುಖವಾಗಿ ಪ್ರತಿ ಎಕರೆಗೆ ಕನಿಷ್ಟ 25 ಕ್ವಿಂಟಾಲ್ ಹಾಗೂ ಗರಿಷ್ಟ 40 ಕ್ವಿಂಟಾಲ್ ಖರೀದಿಸಲಾಗುವುದು. ಭತ್ತದ ಗುಣಮಟ್ಟ ಪರಿಶೀಲಿಸಲು ಅಗತ್ಯ ಗ್ರೇಡರ್‌ಗಳನ್ನು ನೇಮಕ ಮಾಡಿ ಅವರಿಗೆ ತರಬೇತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಹಾರ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಕುಮಾರ್ ಮಾತನಾಡಿ, ಕಳೆದ ಸಾಲಿನಲ್ಲಿ 17,642 ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದರು. ಅಂತೆಯೇ 3,068 ರೈತರು 80,617 ಕ್ವಿಂಟಾಲ್ ಭತ್ತ ಖರೀದಿಯಾಗಿದೆ. ಜಿಲ್ಲೆಯಲ್ಲಿ 7,45 ಲಕ್ಷ ಕ್ವಿಂಟಾಲ್ ದಾಸ್ತಾನು ಸಂಗ್ರಹಿಸುವ ಸಾಮರ್ಥ್ಯದ ಗೋಡೌನ್ ಇದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ.ವಿ.ಎಸ್.ಅಶೋಕ್, ಎಪಿಎಂಸಿ ಉಪನಿರ್ದೇಶಕ ಶ್ರೀನಿವಾಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net