ಮತ ಎಣಿಕೆ ಜಾಗರೂಕತೆಯಿಂದ ನಡೆಸಿ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

DC meeting regarding MLC election Mandya
Published on

ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಮತ ಎಣಿಕೆ ಪ್ರಕ್ರಿಯೆ ಜೂ.4 ರಂದು ನಡೆಯಲಿದೆ. ಅಂತೆಯೇ ಅಂಚೆ ಮತಪತ್ರಗಳ ಎಣಿಕೆಯು ಸಹ ಬಹಳ ಜಾಗರೂಕತೆಯಿಂದ ನಡೆಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಅಂಚೆ ಮತ ಎಣಿಕೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಆಯೋಜಿಸಲಾಗಿದ್ದ ಚುನಾವಣಾ ತರಬೇತಿಯಲ್ಲಿ ಮಾತನಾಡಿದ ಅವರು, ಅಂಚೆ ಮತ ಎಣಿಕೆ ಪ್ರಕ್ರಿಯೆಗೆ ಒಟ್ಟು 11 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್ಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಅಂಚೆ ಮತ ಪತ್ರ ಎಣಿಕೆಯ ಸಹಾಯಕ ಚುನಾವಣಾ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಮತ ಎಣಿಕೆ ಬಹಳ ಸೂಕ್ಷ್ಮವಾಗಿದ್ದು, ಇದಕ್ಕೆಂದು ನಿಯೋಜನೆಗೊಂಡಿರುವ ಅಧಿಕಾರಿ, ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಗಂಭೀರವಾಗಿ ಪರಿಗಣಿಸಿ ಸಂಪೂರ್ಣ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಮತ ಎಣಿಕೆಯ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ತರಬೇತಿಯಲ್ಲಿ ಸರಿಯಾದ ಸಲಹೆ ಜತೆಗೆ ಮಾರ್ಗದರ್ಶನ ಪಡೆಯಿರಿ. ಮತ ಎಣಿಕೆಯ ದಿನದಂದು ಕೌಂಟಿಂಗ್ ಟೇಬಲ್ ಸಂಖ್ಯೆ, ಅಧಿಕಾರಿ ಹೆಸರು, ಎಣಿಕೆ ಮೇಲ್ವಿಚಾರಕರ ಹೆಸರು, ನೀಡುವ ಫೋಸ್ಟಲ್ ಬ್ಯಾಲೆಟ್ ಬಂಡಲ್ನ ಒಟ್ಟು ಸಂಖ್ಯೆಯನ್ನು ನೀಡಲಾಗುವ ನಮೂನೆಯಲ್ಲಿ ತಪ್ಪದೇ ನಮೂದಿಸಬೇಕು. ಮತ ಎಣಿಕೆ ಮೇಲ್ವಿಚಾರಕರ ಜವಾಬ್ದಾರಿಯು ಬಹಳ ಮುಖ್ಯವಾಗಿದೆ. ಅಂದು ಎಲ್ಲ ಸಿಬ್ಬಂದಿ ನಿಗದಿಪಡಿಸುವ ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ಮತ ಎಣಿಕೆಯನ್ನು ನಿಖರವಾಗಿ ನಮೂದಿಸಬೇಕು ಎಂದರು.

ಕಾರ್ಯಾಗಾರದಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net