

ಮಂಡ್ಯ: ವಿಧಾನ ಪರಿಷತ್‌ಗೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಅದರಂತೆ ಜಿಲ್ಲೆಯಲ್ಲಿ 5,403 ಅರ್ಹ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ವಿವಿಧ ರಾಜಕೀಯ ಪಕ್ಷದ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೂ.3ರಂದು ಬೆಳಗ್ಗೆ 8 ರಿಂದ 4 ರವರೆಗೆ ಮತದಾನ ನಡೆಯಲಿದೆ. ಜೂ.6ರಂದು ಮತ ಎಣಿಕೆ ನಡೆಯಲಿದೆ. ಅಂತೆಯೇ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಜೂ.12ರಂದು ಪೂರ್ಣಗೊಳ್ಳುತ್ತದೆ ಎಂದು ವಿವರಿಸಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳು ಒಳಪಡುತ್ತದೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಸಹಾಯಕ ಚುನಾವಣಾಧಿಕಾರಿಗಳಾಗಿರುತ್ತಾರೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಯಾಗಿದ್ದಾರೆ. ಮಂಡ್ಯ ತಾಲೂಕು ಕಚೇರಿಯಲ್ಲಿ ನೋಂದಣಿಯಾಗಿರುವ ಮತದಾರರ ಸಂಖ್ಯೆ ಹೆಚ್ಚಿದ್ದು, ತಾಲೂಕು ಕಚೇರಿಯಲ್ಲಿ ಎರಡು ಮತ ಕೇಂದ್ರ ತೆರೆಯಲಾಗುವುದು. ಜಿಲ್ಲೆಯಲ್ಲಿ 9 ಮತಕೇಂದ್ರಗಳಿವೆ ಎಂದರು.
ಕೆ.ಆರ್.ಪೇಟೆ ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಪುರುಷ-327, ಮಹಿಳೆ-137 ಸೇರಿದಂತೆ ಒಟ್ಟು 464 ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ನಾಗಮಂಗಲ ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಪುರುಷ-296, ಮಹಿಳೆ-147 ಸೇರಿ ಒಟ್ಟು 443 ಮತದಾರರು, ಪಾಂಡವಪುರ ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಪುರುಷ-260, ಮಹಿಳೆ-186 ಸೇರಿ ಒಟ್ಟು 446 ಮತದಾರರು, ಮಂಡ್ಯ ಮಿನಿವಿಧಾನಸೌಧ ಮತ ಕೇಂದ್ರದಲ್ಲಿ ಪುರುಷ-573, ಮಹಿಳೆ-611 ಸೇರಿದಂತೆ ಒಟ್ಟು 1184 ಮತದಾರರು, ಮಂಡ್ಯ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದ ಮತ ಕೇಂದ್ರದಲ್ಲಿ ಪುರುಷ-458, ಮಹಿಳೆ-343 ಸೇರಿ ಒಟ್ಟು 801 ಮತದಾರರು, ಮದ್ದೂರು ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಪುರುಷ-554, ಮಹಿಳೆ-413 ಸೇರಿ ಒಟ್ಟು 967 ಮತದಾರರು, ಶ್ರೀರಂಗಪಟ್ಟಣ ಮಿನಿವಿಧಾನಸೌಧ ಮತ ಕೇಂದ್ರದಲ್ಲಿ ಪುರುಷ-207, ಮಹಿಳೆ-224 ಸೇರಿ ಒಟ್ಟು 431 ಮತದಾರರು ಹಾಗೂ ಮಳವಳ್ಳಿ ಮಿನಿವಿಧಾನಸೌಧ ಮತ ಕೇಂದ್ರದಲ್ಲಿ ಪುರುಷ-452, ಮಹಿಳೆ- 215 ಸೇರಿ ಒಟ್ಟು 667 ಮತದಾರರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ರಾಜಕೀಯ ಪಕ್ಷಗಳ ಮುಖಂಡರಾದ ಬೊಮ್ಮಯ್ಯ, ಮಂಜುನಾಥ್, ನವೀನ್, ದಿನೇಶ್, ರಮೇಶ್ ಇತರರಿದ್ದರು.