ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯವಾದರೆ ಸಹಿಸಲ್ಲ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ

DC meeting regarding land compensation mandya
Published on

ಮಂಡ್ಯ: ಹೇಮಾವತಿ ನಾಲೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನಾನು ರೈತನ ಮಗನೆ. ಅವರ ಕಷ್ಟ ನನಗೂ ತಿಳಿದಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಾಗಮಂಗಲ, ಕೆ.ಆರ್.ಪೇಟೆ ಮತ್ತು ಮಳವಳ್ಳಿ ತಾಲೂಕು ವ್ಯಾಪ್ತಿಯಲ್ಲಿ ನಾಲೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೇರ ಖರೀದಿಯಲ್ಲಿ ಭೂಮಿ ಕಳೆದುಕೊಂಡಿದ್ದ ನಾಗಮಂಗಲ ತಾಲೂಕು ಚಿಕ್ಕಜಟಕದ ಗ್ರಾಮದ ಕಿರಣ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಪ್ರತಿ ಗುಂಟೆ ಜಮೀನಿಗೆ 17,500 ರೂನಂತೆ ಮಾರಾಟವಾಗಿದೆ. ಆದರೆ ನಮಗೆ ಕೇವಲ 3 ಸಾವಿರ ರೂ ದರ ನೀಡಲಾಗುತ್ತಿದೆ. ಇದರಿಂದ ನಮಗೆ ತೀವ್ರ ಅನ್ಯಾವಾಗುತ್ತಿದೆ. ನಮ್ಮ ಜಮೀನಿನ ಮಧ್ಯಭಾಗದಲ್ಲಿಯೇ ನಾಲೆ ಹೋಗಿದೆ. ನಾವು ಏನು ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡರು.

ಹಾಲತಿ ಗ್ರಾಮದ ತಿಮ್ಮಪ್ಪ, ಯಗಟಹಳ್ಳಿಯ ಮಂಜು ದನಿಗೂಡಿಸಿ, ನೋಂದಣಿ ಇಲಾಖೆ ದರದಂತೆ ಪರಿಹಾರ ನೀಡಿದರೆ ರೈತರಿಗೆ ಮೋಸವಾಗುತ್ತದೆ. ನಮಗೆ ಉತ್ತಮ ದರ ನೀಡಿ. ಅಕ್ಕಪಕ್ಕದ ಜಮೀನು ಗುಂಟೆಗೆ 1 ಲಕ್ಷ ರೂನಂತೆ ಮಾರಾಟವಾಗಿವೆ ಎಂದು ಬೇಡಿಕೆ ಇಟ್ಟರು. ಬಿಂಡೇನಹಳ್ಳಿಯ ರೈತ ಪುಟ್ಟಸ್ವಾಮಿ ಮಾತನಾಡಿ, ಪ್ರತಿ ಗುಂಟೆಗೆ 8 ಸಾವಿರ ರೂ ನೀಡಿದರೆ ನಾವೇನು ಮಾಡುವುದು ಎಂದು ಬೇಸರದಿಂದ ನುಡಿದರು.

ಹೇಮಾವತಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಬ್ಯಾಡರಹಳ್ಳಿಯ ಬಿ.ಸಿ.ಮೋಹನ್ ಕುಮಾರ್ ಮಾತನಾಡಿ, ನೋಂದಣಿ ಇಲಾಖೆಯ ಮಾನದಂಡದಂತೆ ದರ ನೀಡಿದರೆ ರೈತರಿಗೆ ಅನ್ಯಾಯವಾಗುತ್ತದೆ. ಈಗಾಗಲೇ ರೈತರು ನಾಲೆಗೆ ಭೂಮಿ ಕಳೆದುಕೊಂಡ 25 ರಿಂದ 40 ವರ್ಷಗಳಾಗಿವೆ. ಈಗ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಯಂತೆ ಪರಿಹಾರ ನೀಡಿದರೆ ಹೇಗೆ?. ಜಿಲ್ಲಾಧಿಕಾರಿ ಮುಕ್ತ ಮನಸ್ಸಿನಿಂದ ಯೋಚಿಸಿ ರೈತರಿಗೆ ಉತ್ತಮ ದರ ನೀಡಿ ಎಂದು ಮನವಿ ಮಾಡಿದರು.

ರೈತರ ಮಾತುಗಳನ್ನು ಆಲಿಸಿದ ಜಿಲ್ಲಾಧಿಕಾರಿ, ನೀರಾವರಿ ಇಲಾಖೆ 2015ರಲ್ಲಿ ನಮಗೆ ಪ್ರಸ್ತಾವನೆ ಕಳಿಸಿದೆ. ಆದರೆ ನಾಲೆ 2008ರಲ್ಲಿಯೇ ಮುಕ್ತಾಯವಾಗಿದೆ. ನಾವು 2015ರ ನೋಂದಣಿ ಇಲಾಖೆ ದರಪಟ್ಟಿಯಂತೆ ನೀಡಿದರೆ ಅತ್ಯಂತ ಕನಿಷ್ಟ ದರ ರೈತರಿಗೆ ನೀಡಿದಂತಾಗುತ್ತದೆ. ಇಲ್ಲಿ ವ್ಯವಸ್ಥೆಯ ವೈಲ್ಯದಿಂದ ಏಳೆಂಟು ವರ್ಷ ರೈತರಿಗೆ ಪರಿಹಾರ ನೀಡುವಲ್ಲಿ ನಿಧಾನವಾಗಿದೆ. ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. 2020 ರಿಂದ 2023ರವರೆಗೆ ನೋಂದಣಿ ಇಲಾಖೆಯಲ್ಲಿ ಯಾವ ಮೊತ್ತಕ್ಕೆ ಜಮೀನು ಮಾರಾಟವಾಗಿದೆ ಎಂಬ ದರಪಟ್ಟಿ ತರಿಸಿ ಅದನ್ನು ಭೂಸ್ವಾಧೀನ ಕಾಯ್ದೆಯಂತೆ ಮಾರಾಟವಾದ ದರಕ್ಕೆ ನಾಲ್ಕುಪಟ್ಟು ಸೇರಿಸಿ ಪರಿಹಾರ ನೀಡುತ್ತೇವೆ ಎಂದರು. ಇದಕ್ಕೆ ರೈತರು ಸಮ್ಮತಿ ವ್ಯಕ್ತಪಡಿಸಿದರು.

ಸಭೆಯಲ್ಲಿ ಜಿ.ಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಕಾವೇರಿ ನೀರಾವರಿ ನಿಗಮದ ಹೇಮಾವತಿ ಎಡದಂಡೆ ನಾಲೆ ನಾಗಮಂಗಲದ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಿ.ಎನ್.ಶಿಲ್ಪಾ, ಯಡಿಯೂರು ವಿಭಾಗದ ಇಂಜಿನಿಯರ್ ಎಸ್.ಟಿ.ಶ್ರೀನಿವಾಸ್, ಎಇಇಗಳಾದ ಜೆ.ಬಿ.ರುದ್ರೇಶ್, ಎಸ್.ಜೆ.ಸುಧಾ ಜೈನ್, ರಾಜೇಗೌಡ, ಎಡಿಎಲ್‌ಆರ್ ಪ್ರಮೋದ್, ಭೂಸ್ವಾಧೀನ ಇಲಾಖೆಯ ಪಾರ್ವತಿ, ಹರದನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ರವಿ, ಹೇಮಾವತಿ ನೀರು ಬಳಕೆದಾರರ ಸಂಘದ ನಿರ್ದೇಶಕರಾದ ಯಗಟಹಳ್ಳಿ ರಾಜಣ್ಣ, ಕೃಷ್ಣಾಪುರದ ಬೋರೇಗೌಡ ಸೇರಿದಂತೆ ಹಲವು ಗ್ರಾಮದ ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net