ಕೆರೆ ಒತ್ತುವರಿ ತೆರವುಗೊಳಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

DC meeting regarding lake encroachment clearance mandya
Published on

ಮಂಡ್ಯ: ಜಿಲ್ಲೆಯಲ್ಲಿ ವಿವಿಧ ಇಲಾಖೆ ವ್ಯಾಪ್ತಿಗೆ ಬರುವ 962 ಕೆರೆಗಳ ಸರ್ವೇ ನಡೆಸಲಾಗಿದೆ. ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿ ಕೆರೆ ಸಂರಕ್ಷಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಕೆರೆಗಳ ಸರ್ವೇ ನಡೆಸಿ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ. ಅವುಗಳನ್ನು ಸಂರಕ್ಷಿಸುವುದು ಆಯಾ ಇಲಾಖೆ ಜವಾಬ್ದಾರಿ ಆಗಿರುತ್ತದೆ. ಪುನ: ಒತ್ತುವರಿಯಾಗಿ ಸರ್ವೇ ಮಾಡಿಕೊಡುವಂತೆ ಪತ್ರ ಬರೆದರೆ ಆಯಾ ಇಲಾಖೆಯವರು ಹಣ ಪಾವತಿಸಬೇಕೆಂದು ಎಂದು ಎಚ್ಚರಿಕೆ ನೀಡಿದರು.

ಕಾವೇರಿ ನೀರಾವರಿ ನಿಗಮ ಹಾಗೂ ಎಚ್.ಎಲ್.ಬಿ.ಸಿ ವ್ಯಾಪ್ತಿಗೆ ಬರುವ ಕೆರೆಗಳ ಒತ್ತುವರಿ ತೆರವುಗೊಳಿಸಲು ಬೇಕಿರುವ ಅನುದಾನದ ಬಗ್ಗೆ ಯೋಜನೆ ಸಿದ್ದಪಡಿಸಿ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿ. ಅನುದಾನ ಹಂತ, ಹಂತವಾಗಿ ಬಿಡುಗಡೆ ಮಾಡಲಾಗುವುದು. ಪ್ರತಿ ಮಾಹೆ ಒತ್ತುವರಿ ತೆರವುಗೊಳಿಸಿ ನಿಗದಿತ ಗುರಿ ಸಾಧಿಸಿ. ನರೇಗಾ ಯೋಜನೆಯಡಿ ಕೆರೆಗಳನ್ನು ಸುಂದರಗೊಳಿಸುವ ಕಾಮಗಾರಿಗಳನ್ನು ಆದ್ಯತೆ ಮೇಲೆ ತೆಗೆದುಕೊಳ್ಳಬೇಕು. ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಕೆರೆಗಳ ಸುತ್ತ ಒತ್ತುವರಿ ತೆರವುಗೊಳಿಸಬೇಕು. ಟ್ರಂಚ್ ನಿರ್ಮಾಣ ಮಾಡಿದ ನಂತರ ಕೆರೆಗಳ ಸುತ್ತ ಗಿಡಗಳನ್ನು ನೆಡಲು ಕ್ರಮವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಧನುಷ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಡಿಡಿಎಲ್ಆರ್ ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net