ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

DC meeting regarding Kannada Rajyotsava mandya
Published on
ಮಂಡ್ಯ: ಜಿಲ್ಲಾಡಳಿತ ವತಿಯಿಂದ ನ.1ರಂದು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವವನ್ನು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತಗೀತೆ ನಂತರ ಧ್ವಜಸಂದೇಶ ನೀಡಲಿದ್ದಾರೆ ಎಂದರು.
ರಾಜ್ಯೋತ್ಸವಕ್ಕೆ ಗಣ್ಯರನ್ನು ಶಿಷ್ಟಾಚಾರದ ಪ್ರಕಾರ ಆಹ್ವಾನಿಸಿ ಹಾಗೂ ಸಾರ್ವಜನಿಕರಿಗೆ ಸೂಕ್ತ ಆಸನಗಳ ವ್ಯವಸ್ಥೆ ಜತೆಗೆ ಧ್ವಜಾರೋಹಣ ಅಂಗಳವನ್ನು ತಳಿರು ತೋರಣ ಹಾಗೂ ಹೂ ಕುಂಡಗಳಿಂದ ಆಲಂಕರಿಸಬೇಕು. ಕುವೆಂಪು ರಚನೆಯ ‘ಎಲ್ಲಾದರೂ ಇರು ಎಂತಾದರೂ ಇರು, ದ.ರಾ ಬೇಂದ್ರೆಯ ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ದಯ್ಯ ಪುರಾಣಿಕರ ಹೊತ್ತಿತೊ ಹೊತ್ತಿತು ಕನ್ನಡದ ದೀಪ, ಚಿನ್ನವೀರ ಕಣವಿಯವರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ,  ಹುಯಿಲಗೋಳ ನಾರಾಯಣರಾಯರ ಉದಯವಾಗಲಿ ಚೆಲುವ ಕನ್ನಡ ನಾಡು ಹಾಡುಗಳು’ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಲಿವೆ ಎಂದರು.
ಕನ್ನಡ ಸಾಹಿತ್ಯ, ಇತಿಹಾಸದ ಗತವೈಭವ ಸಾರುವ ಹಾಗೂ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹನೀಯರ ಟ್ಯಾಬ್ಲೋ ಹಾಗೂ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ರಾಷ್ಟ್ರೀಯ ಹಾಗೂ ಕನ್ನಡ ನಾಡಿನ ಭಾವೈಕ್ಯತೆ ಮೂಡಿಸುವ ನೃತ್ಯರೂಪಕ ಕಾರ್ಯಕ್ರಮವನ್ನು ಕಾಲಮಿತಿಯಲ್ಲಿ ನಡೆಸಿ ಹಾಗೂ ಆಗಮಿಸಿದ ಎಲ್ಲರಿಗೂ ಸಿಹಿ ವಿತರಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಂಡ್ಯ ಎಸಿ ಶಿವಮೂರ್ತಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಕನ್ನಡ ಪರ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net