ಕುಡಿಯುವ ನೀರಿನ ಪರೀಕ್ಷೆ ಕಡ್ಡಾಯ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

DC meeting regarding drinking water mandya
Published on

ಮಂಡ್ಯ: ಜಿಲ್ಲೆಯ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಮುನ್ನ ನಿಯಮಿತವಾಗಿ ಪರೀಕ್ಷೆ ನಡೆಸಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರಿಶೀಲನೆ ಮತ್ತು ವ್ಯವಸ್ಥೆ ಕುರಿತು ಪರಿಶೀಲಿಸಿ ಮಾತನಾಡಿದ ಅವರು, ಕಲುಷಿತ ನೀರು ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಕುಡಿಯುವ ನೀರಿಗೆ ಯಾವುದೇ ಕಲುಷಿತ ನೀರು ಸೇರ್ಪಡೆಯಾಗದಂತೆ ಎಚ್ಚರವಹಿಸಿ ಎಂದರು.

ಜಾಕ್ವೆಲ್ ಪಾಯಿಂಟ್‌ಗೆ ನೀರು ಸೇರ್ಪಡೆಯಾಗುವ ನದಿಗಳು ಯಾವುದು ಎಂಬುದನ್ನು ತಿಳಿದು, ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಒಂದು ವೇಳೆ ಪರೀಕ್ಷೆ ನಡೆಸದೆ ಕುಡಿಯುವ ನೀರು ಸರಬರಾಜು ಮಾಡಿ ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ತೊಂದರೆ ಉಂಟಾದಲ್ಲಿ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರ ಪ್ರದೇಶಗಳಲ್ಲಿ ನೀರಿನ ವ್ಯವಸ್ಥೆಯಡಿ ಬರುವ ಎಲ್ಲ ಪೈಪ್‌ಲೈನ್‌ಗಳನ್ನು ಪ್ರತಿದಿನವೂ ಪರಿಶೀಲನೆ ನಡೆಸಬೇಕು. ಒಂದು ವೇಳೆ ಹಾನಿಯಾಗಿದ್ದರೆ ಕಲುಷಿತ ಕುಡಿಯುವ ನೀರಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಗಮನವಹಿಸಿ ದುರಸ್ಥಿ ಕಾರ್ಯ ನಡೆಸಬೇಕು. ಒಂದು ವೇಳೆ ನಗರ ಪ್ರದೇಶಗಳಲ್ಲಿ ವಾಂತಿ. ಭೇದಿ ಪ್ರಕರಣ ಕಂಡು ಬಂದರೆ ತಕ್ಷಣ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಯನ್ನು ಸ್ಥಗಿತಗೊಳಿಸಿ, ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಪರೀಕ್ಷೆಗಾಗಿ ಹತ್ತಿರದ ಇಲಾಖಾ ಪ್ರಯೋಗಾಲಯಗಳಿಗೆ ನೀರಿನ ಮಾದರಿಗಳನ್ನು ಸಲ್ಲಿಸಬೇಕು. ಕಲುಷಿತವೆಂದು ಕಂಡುಬಂದರೆ ಕೂಡಲೇ ಸರಬರಾಜು ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಪರ್ಯಾಯ ಮೂಲಗಳಿಂದ ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಿ ಎಂದರು.

ನೀರಿನ ಸರಬರಾಜು ವ್ಯವಸ್ಥೆಯಲ್ಲಿರುವ ಎಲ್ಲ ನೀರು ಶೇಖರಣಾ ಘಟಕಗಳನ್ನು ಸ್ವಚ್ಛಗೊಳಿಸಿ ಪ್ರತಿ ಹಂತದಲ್ಲಿಯೂ ಕ್ಲೋರಿನೇಷನ್ ಮಾಡಲು ಕ್ರಮ ವಹಿಸಬೇಕು. ನೀರಿನ ಮೂಲಗಳಾದ ಕೊಳವೆ ಬಾವಿಗಳ ಸುತ್ತಮುತ್ತಲೂ ಯಾವುದೇ ಕಲುಷಿತ ಅಥವಾ ಚರಂಡಿ ನೀರು ನಿಲ್ಲದಂತೆ ನೀರು ಸರಾಗವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಕೈಗೊಂಡು ನೀರಿನ ಮೂಲದ ಸುತ್ತ ಕಾಂಕ್ರೀಟ್ ಕಟ್ಟೆ ಕಟ್ಟುವುದು ಸೂಕ್ತ. ಕೆಲವು ನಗರದ ಜನವಸತಿ ಪ್ರದೇಶಗಳಲ್ಲಿರುವ ಕೊಳವೆ ಬಾವಿಗಳ ಕೇಸಿಂಗ್ ಪೈಪ್ ಹಾನಿಯಾಗಿರುವುದು ಕಂಡು ಬಂದಿದ್ದು, ಭೂಮಿಯ ಮಟ್ಟಕ್ಕೆ ಅಥವಾ ಅದಕ್ಕಿಂತ ಕೆಳಗಿರುವ ಕೊಳವೆ ಬಾವಿಗಳ ಕೇಸಿಂಗ್ ಪೈಪ್‌ನ್ನು ಭೂಮಿಯ ಮಟ್ಟದಿಂದ ಎರಡು ಅಡಿ ಎತ್ತರಿಸಿ ಕಲುಷಿತ ನೀರು ಸೇರದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ. ಕುಡಿಯುವ ನೀರಿನ ಮೂಲಗಳ ಗುಣಮಟ್ಟದ ಪರೀಕ್ಷೆಗಳನ್ನು ಮಳೆಗಾಲದ ಮುನ್ನ, ನಂತರ ಕೈಗೊಂಡು ಸಂಬಂಧಪಟ್ಟ ಪರೀಕ್ಷೆಗಳನ್ನು ಸ್ಥಳೀಯವಾಗಿ ಕೈಗೊಂಡು ಪರೀಕ್ಷಾ ವರದಿಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.

ಕುಡಿಯುವ ನೀರು ಸರಬರಾಜಿನ ಕೊಳವೆ ಮಾರ್ಗಗಳು ಹಾಳಾಗಿದ್ದರೆ ತಕ್ಷಣ ದುರಸ್ಥಿಪಡಿಸಲು ಕ್ರಮವಹಿಸಬೇಕು. ನೀರು ಸರಬರಾಜು ಕೊಳವೆ ಮಾರ್ಗದಲ್ಲಿ ಪೈಪ್ ಹಾಳಾಗಿದ್ದರೆ ಹೊರಗಿನ ಇತರೆ ವಸ್ತುಗಳು/ಕೊಳಚೆ ನೀರು/ಕುಡಿಯುವ ನೀರಿನ ಸರಬರಾಜಿನ ಪೈಪ್‌ಲೈನ್ ಒಳಗೆ ಹರಿಯದಂತೆ ಕ್ರಮ ಕೈಗೊಳ್ಳಬೇಕು. ಒಳಚರಂಡಿ ಕೊಳವೆ ಮಾರ್ಗ ಮತ್ತು ನೀರು ಸರಬರಾಜಿನ ಕೊಳವೆ ಮಾರ್ಗವನ್ನು ಒಂದೇ ಕಂದಕದಲ್ಲಿ ಅಳವಡಿಸಬಾರದು. ಇದಲ್ಲದೆ ನೀರಿನ ಶೇಖರಣೆಗೆ ಬಳಸುವ ಓವರ್‌ಹೆಡ್ ಟ್ಯಾಂಕ್ ಮತ್ತು ಕಿರು ನೀರು ಸರಬರಾಜು ಮಾಡುವ ನೀರಿನ ಶೇಖರಣಾ ತೊಂಬೆಗಳನ್ನು ಕಾಲ-ಕಾಲಕ್ಕೆ ಸ್ವಚ್ಛಗೊಳಿಸಬೇಕು. ಸರ್ಕಾರದ ವಿವಿಧ ಯೋಜನೆಯಡಿ ಕುಡಿಯುವ ನೀರನ್ನು ಸರಬರಾಜು ಮಾಡಲು ನಿರ್ಮಿಸಿರುವ ಓವರ್‌ಹೆಡ್ ಟ್ಯಾಂಕ್‌ಗಳ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಕನಿಷ್ಟ ಪ್ರತಿ ತಿಂಗಳಿಗೊಮ್ಮೆ ಕೈಗೊಂಡು ವರದಿಗಳನ್ನು ಜಿಲ್ಲೆಯ ಕಾರ್ಯಪಾಲಕ ಇಂಜಿನಿಯರ್‌ಗೆ ಸಲ್ಲಿಸಬೇಕು ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ, ನಗರಸಭೆ ಪೌರಾಯುಕ್ತ ಆರ್.ಮಂಜುನಾಥ್ ಸೇರಿದಂತೆ ಪುರಸಭೆ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net