

ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಜೂ.4ರಂದು ನಡೆಯಲಿದೆ. ಅಂದು ಮತ ಎಣಿಕೆಯ ಕೆಲಸ ನಿಖರವಾಗಿರಲಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮತ ಎಣಿಕೆ ತರಬೇತಿ ಕುರಿತಂತೆ ಸೋಮವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಂಟು ವಿಧಾನಸಭಾ ಕ್ಷೇತ್ರದ ಇ.ವಿ.ಎಂ ಯಂತ್ರಗಳನ್ನು 16 ಕೊಠಡಿಗಳು/ ಸ್ಟ್ರಾಂಗ್ ರೂಂನಲ್ಲಿ ಇಡಲಾಗಿದೆ. ಜೂ.4 ರಂದು 16 ಸ್ಟ್ರಾಂಗ್ ರೂಂಗಳನ್ನು ತೆರೆದು ಎಣಿಕೆ ಪ್ರಾರಂಭಿಸಲಾಗುವುದು ಎಂದರು.
ಇ.ವಿ.ಎಂ ಗಳು ಬೆಳಗ್ಗೆ 8 ಗಂಟೆಗೆ ಎಣಿಕೆ ಟೇಬಲ್ಗಳಿಗೆ ತಲುಪಿಸಲಾಗುವುದು. ಸಿಬ್ಬಂದಿ ಎಣಿಕೆಯ ಸಂದರ್ಭದಲ್ಲಿ ಚುನಾವಣಾ ಆಯೋಗ ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು. ಯಾವುದೇ ಲೋಪವಾಗದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿಗಳು ಪ್ರತಿ ಸುತ್ತಿನ ಎಣಿಕೆಯನ್ನು ಚುನಾವಣಾ ಆಯೋಗದ ವೆಬ್ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕಿರುತ್ತದೆ. ಇಲ್ಲಿ ತಿದ್ದುಪಡಿಗೆ ಅವಕಾಶ ನೀಡದಂತೆ ಕಾರ್ಯನಿರ್ವಹಿಸಿ. ಪ್ರತಿ ವಿಧಾನಸಭಾ ಕ್ಷೇತ್ರವಾರು ಇ.ವಿ.ಎಂ.ಗಳನ್ನು ಮತ ಎಣಿಕೆ ಕೊಠಡಿಗೆ ತಲುಪಿಸಲು ಸಿಬ್ಬಂದಿ ನಿಯೋಜಿಸಲಾಗುವುದು. ಸಹಾಯಕ ಚುನಾವಣಾಧಿಕಾರಿಗಳು ಅವರನ್ನು ಗುರುತಿಸಲು ನಿಗದಿಪಡಿಸಿದ ಬಣ್ಣದ ಟೀ ಶರ್ಟ್ ಸಹ ನೀಡಲಾಗುವುದು. ನಿಯೋಜಿಸಲಾಗುವ ಸಿಬ್ಬಂದಿ ತಿಳಿಸಲಾಗುವ ಸಮಯಕ್ಕೆ ಎಣಿಕೆ ಕೇಂದ್ರ ಹಾಗೂ ಸ್ಥಳದಲ್ಲಿ ಹಾಜರಾಗಿ ಶಿಸ್ತು ಬದ್ಧವಾಗಿ ಕಾರ್ಯನಿರ್ವಹಿಸಬೇಕು. ಈ ಕುರಿತಂತೆ ಅಧಿಕಾರಿ ಹಾಗೂ ಸಿಬ್ಬಂದಿಗೆ ನಿರ್ದೇಶನ ನೀಡಿ ಸಮನ್ವಯದಿಂದ ಕಾರ್ಯನಿರ್ವಹಿಸಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸ್ಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.