ಪ್ರವಾಸೋದ್ಯಮ ಅಭಿವೃದ್ಧಿಗೆ ನೂರು ಕೋಟಿ ರೂ ವೆಚ್ಚದ ಡಿಪಿಆರ್: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

DC Meeting on Tourism Development Mandya
Published on

ಮಂಡ್ಯ: ಶ್ರೀರಂಗಪಟ್ಟಣ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು 100 ಕೋಟಿ ರೂ ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೀರಂಗನಾಥಸ್ವಾಮಿ ದೇವಾಲಯವನ್ನು ಕೇಂದ್ರವಾಗಿರಿಸಿಕೊಂಡು ಅದರ ಸುತ್ತಲಿನ 5.5 ಕಿ.ಮೀನಲ್ಲಿ ಬರುವ ಪ್ರವಾಸಿ ತಾಣಗಳಿಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.

ಇದರಲ್ಲಿ ಒಡೆಯರ್ ಅವರ ಜನ್ಮಸ್ಥಳ, ಪುರಾತನ ಘಾಟ್ ಸಂರಕ್ಷಣೆ, ವಿವಿಧ ರೀತಿಯ ಸೂಚನಾ ಲಕ, ಪುರಾತನ ಕಾಲದಲ್ಲಿ ಯುದ್ಧದಲ್ಲಿ ಉಪಯೋಗಿಸುತ್ತಿದ್ದ ಶಸಾಸ್ತ, ಕಲ್ಯಾಣಿ, ಮಂಟಪ, ರಸ್ತೆಗಳು ಸೇರಿದಂತೆ ವಿವಿಧ ರೀತಿಯ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಈ ಯೋಜನೆ ಸಂಪೂರ್ಣವಾಗಿ ಸಿದ್ಧವಾದ ನಂತರ ಶ್ರೀರಂಗಪಟ್ಟಣ ಶಾಸಕರೊಂದಿಗೆ ಸಭೆ ನಡೆಸಿ ನಂತರ ಪ್ರಸ್ತಾವನೆಯನ್ನು ಸಲ್ಲಿಸಬೇಕಿದೆ. ಯೋಜನೆಯಿಂದ ಪ್ರವಾಸೋದ್ಯಮ ಉತ್ತೇಜನ ನೀಡುವುದರ ಜತೆಗೆ ಹಲವಾರು ಉದ್ಯೋಗ ಸೃಷ್ಠಿಸಬಹುದು. ಬರುವ ಆದಾಯದಿಂದ ಬಹಳಷ್ಟು ಕೊಳ ಹಾಗೂ ಸ್ಥಳಗಳಲ್ಲಿ ಸ್ವಚ್ಛತೆ ನಿರ್ವಹಣೆ ಮಾಡಬಹುದು ಎಂದು ಹೇಳಿದರು.

ರಾಜ್ಯ ಪುರಾತತ್ವ ಇಲಾಖೆಯ ಆಯುಕ್ತ ದೇವರಾಜ್ ಮಾತನಾಡಿ, ಶ್ರೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ಕೆಲವು ದುರಸ್ತಿ ಕಾಮಗಾರಿಗಳು ನಡೆಯಬೇಕಿದ್ದು, ಇದಕ್ಕೆ ಅನುದಾನ ಪುರತತ್ವ ಇಲಾಖೆಯಲ್ಲಿ ಲಭ್ಯವಿಲ್ಲದಿದ್ದಲ್ಲಿ ದೇವಸ್ಥಾನದಿಂದ ಅನುದಾನ ಪಡೆದು ಕಾಮಗಾರಿ ನಡೆಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಸಭೆಯಲ್ಲಿ ಭಾರತ ಸರ್ಕಾರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವರ ವಿಶೇಷಾಧಿಕಾರಿ ಬಿ.ಎನ್.ಕೃಷ್ಣಯ್ಯ, ಪುರಾತತ್ವ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ಶ್ರೀರಂಗನಾಥಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ, ನಿಮಿಷಾಂಭ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ಶ್ರೀರಂಗಪಟ್ಟಣ ಪುರಸಭೆ ಮುಖ್ಯಾಧಿಕಾರಿ ರಾಜಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net