

ಮಂಡ್ಯ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಗುರುತಿಸಲಾಗಿರುವ ಅಗತ್ಯ ಸೇವಾ ವಲಯದ ಮತದಾರರು ಮತದಾನ ಮಾಡಲು ನಗರದ ಮಂಡ್ಯ ವಿಶ್ವವಿದ್ಯಾಲಯದ ಕಲಾ ವಿಭಾಗದಲ್ಲಿ ಏ.19, 20 ಹಾಗೂ 21ರಂದು ಅಂಚೆ ಮತದಾನ ಕೇಂದ್ರ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಫೋಸ್ಟಲ್ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗ ಪೊಲೀಸ್, ಅಗ್ನಿಶಾಮಕ ಇಲಾಖೆ, ಸಾರಿಗೆ, ಚೆಸ್ಕಾಂ ಸೇರಿದಂತೆ 11 ವಲಯಗಳನ್ನು ಅಗತ್ಯ ಸೇವಾ ವಲಯ ಎಂದು ಗುರುತಿಸಲಾಗಿದೆ. ಅವರಿಗೆ ಫಾರ್ಮ್ 12 ಡಿ ವಿತರಿಸಲಾಗಿದೆ ಎಂದರು.
ಲೋಕಸಭಾ ಕ್ಷೇತ್ರದ ಮತದಾರರಾಗಿ ಮಂಡ್ಯದಲ್ಲೇ ಕಾರ್ಯನಿರ್ವಹಿಸುತ್ತಿರುವ 501 ಮತದಾರರು ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರಾಗಿ ಬೇರೆ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 521 ಮತದಾರರು ಸೇರಿದಂತೆ ಒಟ್ಟು 1022 ಮತದಾರರು ಫೋಸ್ಟಲ್ ಬ್ಯಾಲೆಟ್‌ನಲ್ಲಿ ಮತದಾನ ಮಾಡಲು ಒಪ್ಪಿಗೆ ಪಡೆದಿದ್ದಾರೆ. ಇವರು ನಿಗದಿತ ದಿನದಂದು ಬೆಳಗ್ಗೆ 9ಗಂಟೆಯಿಂದ ಸಂಜೆ 5ರವರೆಗೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅರ್ಹರು ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದರು.
ಫೋಸ್ಟಲ್ ನೋಡಲ್ ಅಧಿಕಾರಿಗಳು ತಮ್ಮ ವಲಯದ ವ್ಯಾಪ್ತಿಯ ಮತದಾರರಿಗೆ ಮಾಹಿತಿ ನೀಡಿ ಮತದಾನ ಮಾಡುವಂತೆ ತಿಳಿಸಿ. ಜಿಲ್ಲಾಧಿಕಾರಿ ಕಚೇರಿಯಿಂದಲೂ ಸಹ ಎಲ್ಲರಿಗೂ ಎಸ್‌ಎಂಎಸ್ ಮೂಲಕ ಮತದಾನದ ದಿನಾಂಕ, ಸಮಯ ಹಾಗೂ ಸ್ಥಳದ ಮಾಹಿತಿಯನ್ನು ಸಹ ಕಳುಹಿಸಿಕೊಡಲಾಗುವುದು. ಸೇವಾ ಮತದಾರರಿಗೆ ಏ.26ರಂದು ಇವಿಎಂ ಮೂಲಕ ಮತದಾನ ಮಾಡಲು ಅವಕಾಶವಿರುವುದಿಲ್ಲ. ಈ ವಿಷಯವನ್ನು ನೋಡಲ್ ಅಧಿಕಾರಿಗಳು ತಪ್ಪದೇ ಮತದಾರರಿಗೆ ತಿಳಿಸಿ ಎಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ತಹಸೀಲ್ದಾರ್ ರವಿಶಂಕರ್, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಶಿವರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಇತರರಿದ್ದರು.