ಆ.20ರಿಂದ ಮತದಾರರ ಪಟ್ಟಿ ಸಮೀಕ್ಷೆ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

DC Meeting on Electoral Roll Survey Mandya
Published on

ಮಂಡ್ಯ: ಭಾರತ ಚುನಾವಣಾ ಆಯೋಗದ ಸೂಚನೆಯಂತೆ 2025 ಜ.1ಕ್ಕೆ ಅನ್ವಯವಾಗುವಂತೆ ಭಾವಚಿತ್ರ ಸಹಿತ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧ ಆ.20ರಿಂದ ಅ.18ರವರೆಗೆ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 18 ವರ್ಷ ತುಂಬಿರುವ ಅರ್ಹ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು. ಅಗತ್ಯವಿರುವ ಕಡೆ ಮತದಾರರ ಪಟ್ಟಿಯಲ್ಲಿನ ಗುಣಮಟ್ಟವಿಲ್ಲದ ಭಾವಚಿತ್ರವನ್ನು ಬದಲಾಯಿಸಿ ಉತ್ತಮ ಗುಣಮಟ್ಟದನ್ನು ಅಳವಡಿಸಲಾಗುವುದು ಎಂದರು.

ಮತಗಟ್ಟೆಗಳ ಭೌತಿಕ ಪರಿಶೀಲನೆ ನಡೆಸುವುದು. 1 ಮತಗಟ್ಟೆಯಲ್ಲಿ 1500ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿದ್ದರೆ ಅಲ್ಲಿ 2 ಮತಗಟ್ಟೆಯನ್ನು ಸ್ಥಾಪಿಸಲು ತಯಾರಿ ನಡೆಸಲಾಗುವುದು. ಇ-ಜನ್ಮ ತಂತ್ರಾಶದಿಂದ ಜಿಲ್ಲೆಯಲ್ಲಿ ಮರಣ ಹೊಂದಿರುವ ಮತದಾರರ ವಿವರವನ್ನು ಪಡೆದು ಪರಿಶೀಲಿಸಿ ನಂತರ ಪಟ್ಟಿಯಿಂದ ತೆಗೆದು ಹಾಕಲಾಗುವುದು. ಜಿಲ್ಲೆಯ ಮತದಾರರ ಪಟ್ಟಿ/ಗುರುತಿನ ಚೀಟಿಗಳಲ್ಲಿ ಹೆಸರು, ವಿಳಾಸ ಮುಂತಾದ ಯಾವುದೇ ರೀತಿಯ ತಿದ್ದುಪಡಿಗಳು ಇದ್ದಲ್ಲಿ ಮತದಾರರು ಲೋಪದೋಷಗಳನ್ನು ಸರಿಪಡಿಸಿಕೊಂಡು ಪರಿಷ್ಕರಿಸಿಕೊಳ್ಳುವುದು. ಒಂದೇ ಕುಟುಂಬದ ಮತದಾರರನ್ನು ಒಂದೇ ಮತಗಟ್ಟೆಯಲ್ಲಿ ಹೆಸರು ಬರುವಂತೆ ಸರಿಪಡಿಸಲಾಗುವುದು. ಉಪ ವಿಭಾಗಾಧಿಕಾರಿಗಳು ಮತದಾರರ ನೋಂದಣಾಧಿಕಾರಿಯಾಗಿ ಹಾಗೂ ತಹಸೀಲ್ದಾರರು ಸಹಾಯಕ ನೋಂದಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪವಿಭಾಗಾಧಿಕಾರಿ ನಂದೀಶ್, ಚುನಾವಣಾ ತಹಸೀಲ್ದಾರ್ ಸಿ.ಜಿ.ರವಿಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net