

ಮಂಡ್ಯ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶವಿದೆ. ಅದೇ ರೀತಿ ಅಂತಹವರಿಗೆ ಮಾತ್ರ ತಾತ್ಕಾಲಿಕ ಪಟಾಕಿ ಪರವಾನಗಿ ನೀಡಲಾಗುವುದು. ಸೂಚನೆ ಉಲ್ಲಂಘಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡಿದರೆ ನಿಯಮಾನುಸಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಪರವಾನಗಿ ನೀಡುವ ಹಾಗೂ ಮುಂಜಾಗ್ರತಾ ಕ್ರಮದ ಬಗ್ಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅ.29 ರಿಂದ ನ.2ರವರೆಗೆ ಹಸಿರು ಪಟಾಕಿ ಮಾರಾಟಗಾರರಿಗೆ ಪರವಾನಿಗೆ ನೀಡಲಾಗುವುದು. ಶಾಲೆ, ಆಸ್ಪತ್ರೆ ಹಾಗೂ ಜನ ಸಂದಣಿ ಇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಪಟಾಕಿ ಮಾರಾಟ ನಿಷೇಧಿಸಲಾಗುವುದು. ಸಾರ್ವಜನಿಕರು ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿ ಹೊಡೆಯಲು ಮಾತ್ರ ಸುಪ್ರೀಂ ಕೋರ್ಟ್ ಆದೇಶದಂತೆ ಅವಕಾಶವಿದೆ. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ತಿಳಿಸಿದರು.
ಪಟಾಕಿ ಪರವಾನಿಗೆ ಪಡೆಯುವವರು ವಿಶಾಲ ಮೈದಾನದಲ್ಲಿ ಮಾರಾಟ ಮಾಡಬೇಕು. ಪರವಾನಿಗೆ ನೀಡಲಾದ ಪ್ರದೇಶವನ್ನು ಹೊರತು ಪಡಿಸಿ ಬೇರೆ ಸ್ಥಳದಲ್ಲಿ ಪಟಾಕಿಯನ್ನು ಮಾರಾಟ ಮಾಡುವಂತಿಲ್ಲ. ಒಂದು ಅಂಗಡಿ ಮಳಿಗೆಯಿಂದ ಮತ್ತೊಂದು ಅಂಗಡಿ ಮಳಿಗೆಗೆ 6 ಮೀಟರ್ ಅಂತರ ಇರಬೇಕು. ಪ್ರತಿ ಮಳಿಗೆಯಲ್ಲೂ ಎಂಟ್ರಿ ಹಾಗೂ ಎಕ್ಸಿಟ್ ಇರಬೇಕು. ಒಂದು ವೇಳೆ ಬೆಂಕಿ ಅವಘಢ ಸಂಭವಿಸಿದರೆ ಬೆಂಕಿಯನ್ನು ನಂದಿಸಲು ಡ್ರಮ್ಗಳಲ್ಲಿ ನೀರು ತುಂಬಿಸಿರಬೇಕು. ಪಟಾಕಿ ಅಂಗಡಿಗಳಲ್ಲಿ ರಾತ್ರಿ ಸಮಯದಲ್ಲಿ ಯಾರು ಮಲಗುವಂತಿಲ್ಲ. ಅಂಗಡಿಯಲ್ಲಿ ಧೂಮಪಾನ ಮಾಡುವುದರಿಂದ ಅದರ ಕಿಡಿಯಿಂದ ಸ್ಫೋಟಗೊಳ್ಳುವ ಸಾಧ್ಯತೆ ಇದ್ದು, ಧೂಮಪಾನ ಮಾಡುವಂತಿಲ್ಲ. ಈ ನಿಯಮವಳಿಗಳನ್ನು ಅನುಸರಿಸಬೇಕು ಎಂದರು.
ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಹಸಿರು ಪಟಾಕಿಯನ್ನೇ ಬಳಸಬೇಕು. ಹಾಗೂ ರಾತ್ರಿ 10 ಗಂಟೆಯ ನಂತರ ಪಟಾಕಿ ಹೊಡೆಯುವಂತಿಲ್ಲ ಎಂದು ಪ್ರತಿ ಪಟಾಕಿ ಅಂಗಡಿ ಮುಂದೆ ಮಾರ್ಗಸೂಚಿಯ ನಾಮಫಲಕವನ್ನು ಅಳವಡಿಸಬೇಕು. ಈಗಾಗಲೇ ಪರವಾನಗಿ ನೀಡಲು ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ತಹಸೀಲ್ದಾರ್‌ಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಅವರು ಅಂಗಡಿ ತೆರೆಯುವ ಸ್ಥಳಗಳನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು. ಸಾರ್ವಜನಿಕರಲ್ಲಿ ಆದಷ್ಟು ಪಟಾಕಿ ಕಡಿಮೆಗೊಳಿಸಿ, ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮಿಸಿ. ನಗರಸಭೆಯ ಪೌರ ಕಾರ್ಮಿಕರು ಮನೆ ಮನೆಗೆ ಕಸಸಂಗ್ರಹ ಮಾಡಲು ಹೋದಾಗ ಸಾರ್ವಜನಿಕರಲ್ಲಿ ಪಟಾಕಿಗಳನ್ನು ಕಡಿಮೆಗೊಳಿಸಿ ದೀಪವನ್ನು ಹಚ್ಚಿ ಎಂದು ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಮಾರಾಟಗಾರರು ಪಟಾಕಿಗಳನ್ನು ಗೋಡೌನ್‌ನಲ್ಲಿ ಇಡಲು ಯಾವುದೇ ಅವಕಾಶವಿಲ್ಲ. ಪಟಾಕಿ ಮಾರಾಟಗಾರರು ಕಡಿಮೆ ಬೆಲೆಗೆ ಸಿಗುವಂತಹ ಪಟಾಕಿ, ಸಿಡಿಮದ್ದುಗಳನ್ನು ಖರೀದಿ ಮಾಡುತ್ತಾರೆ. ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು. ಹಸಿರು ಪಟಾಕಿಗೆ ಸಂಬಂಧಿಸಿದಂತೆ ಪಟಾಕಿ ಬಾಕ್ಸ್ ಮೇಲೆ ಇರುವ ಕ್ಯೂ ಆರ್ ಕೋಡ್ ಅನ್ನು ಮೊಬೈಲ್ನಲ್ಲಿ ಸ್ಕಾೃನ್ ಮಾಡಿದಾಗ ಹಸಿರು ಪಟಾಕಿ ಎಂದು ತಿಳಿಯಬಹುದಾಗಿದೆ. ಮಾರಾಟ ಮಾಡಲು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಅವಕಾಶವಿರಲಿದೆ. ಬಳಿಕ ಅಂಗಡಿ ತೆರೆದಿದ್ದರೆ ಅಲ್ಲಿಗೆ ಪೊಲೀಸ್ ತಂಡವು ಭೇಟಿ ನೀಡಿ ಅಂಗಡಿ ಮುಚ್ಚಿಸಲಾಗುತ್ತದೆ. ಮಾತ್ರವಲ್ಲದೆ ಅಂತವರ ಪರವಾನಿಗೆ ರದ್ದಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಕೆಲವರು ರಾತ್ರಿ 10 ಗಂಟೆಯ ನಂತರ ಪಟಾಕಿ ಹೊಡೆಯುವುದು ಕಂಡುಬರುತ್ತದೆ. ಇದು ಶಬ್ದ ಮಾಲಿನ್ಯಕ್ಕೆ ಕಾರಣವಾಗುವುದಲ್ಲದೇ ಅನಾರೋಗ್ಯ ವ್ಯಕ್ತಿಗಳಿಗೆ ತೊಂದರೆ ಉಂಟಾಗುತ್ತದೆ. ರಾತ್ರಿ 10 ಗಂಟೆಯ ನಂತರ ಪಟಾಕಿ ಸಿಡಿಸುವವರಿಗೆ ಪೊಲೀಸರು ನಿರ್ದಿಷ್ಟ ದಂಡ ವಿಧಿಸಿ ಶಿಕ್ಷೆ ವಿಧಿಸಬೇಕು. ಆಗ ಮಾತ್ರ ಇಂತಹ ಘಟನೆಗಳ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಾರೆ. ಜತೆಗೆ ಪಟಾಕಿ ಪರವಾನಿಗೆ ತೆಗೆದುಕೊಂಡಿರುವ ಪಟಾಕಿ ಮಾರಾಟಗಾರರ ಮನೆಯನ್ನು ಪರಿಶೀಲನೆ ನಡೆಸಬೇಕು. ಮಾರಾಟಗಾರರು ಯಾವುದೇ ಕಾರಣಕ್ಕೂ ಮನೆಯಲ್ಲಿ ಪಟಾಕಿಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ರಾಘವೇಂದ್ರ, ತಹಸೀಲ್ದಾರ್‌ಗಳಾದ ಡಾ.ಶಿವಕುಮಾರ್ ಬಿರಾದಾರ, ಡಾ.ಸ್ಮಿತಾ ರಾಮು ಇತರರಿದ್ದರು.