ಅಪಘಾತ ತಡೆಗೆ ಜಂಟಿ ಸಮೀಕ್ಷೆ

07chn12
Published on

ಚಾಮರಾಜನಗರ: ಜಿಲ್ಲಾ ವ್ಯಾಪ್ತಿಯ ರಸ್ತೆ, ಹೆದ್ದಾರಿ ಮಾರ್ಗಗಳಲ್ಲಿ ಪದೇ ಪದೇ ಅಪಘಾತ ಸಂಭವಿಸುತ್ತಿರುವ ಸ್ಥಳಗಳನ್ನು (ಬ್ಲಾಕ್‌ಸ್ಪಾಟ್) ಗುರುತಿಸಿ ಅಪಘಾತ ತಪ್ಪಿಸಲು ಕೈಗೊಳ್ಳಬೇಕಿರುವ ಪರಿಹಾರ ಕ್ರಮಗಳಿಗಾಗಿ ವಿವಿಧ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ಇತರೆ ವ್ಯಾಪ್ತಿಗೆ ಬರುವ ರಸ್ತೆಗಳ ಕೆಲವು ಸ್ಥಳಗಳಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ವೈಜ್ಞಾನಿಕ ಕಾರಣಗಳನ್ನು ತಿಳಿದು ಅಪಘಾತ ತಡೆಗಟ್ಟಲು ವಹಿಸಬೇಕಿರುವ ಕ್ರಮಗಳಿಗಾಗಿ ರಾಷ್ಟ್ರ, ರಾಜ್ಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ, ಸಾರಿಗೆ, ಪೊಲೀಸ್ ಇಲಾಖೆ ಒಳಗೊಂಡ ಅಧಿಕಾರಿಗಳ ತಂಡ ಇದುವರೆಗೆ ಅಪಘಾತ ಸಂಭವಿಸಿರುವ ಸ್ಥಳಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸುವಂತೆ ತಿಳಿಸಿದರು.

ಹೆದ್ದಾರಿ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವ ಮಾರ್ಗದರ್ಶನ ಫಲಕಗಳನ್ನು ಅಳವಡಿಸಬೇಕು. ರಸ್ತೆ, ಸೇತುವೆಗಳಲ್ಲಿ ಅಗತ್ಯವಿರುವೆಡೆ ಬ್ಲಿಂಕರ್ಸ್‌ಗಳು, ಡಿವೈಡರ್ ಪೋಸ್ಟ್, ರಿಪ್ಲೆಕ್ಟರ್ ಸ್ಟಿಕ್ಕರ್‌ಗಳನ್ನು ಹಾಕಬೇಕು. ಹೆದ್ದಾರಿಗಳಲ್ಲಿ ಉತ್ತಮ ಗುಣಮಟ್ಟದ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಬ್ಲಾಕ್ ಸ್ಪಾಟ್ ಗುರುತಿಸಿದ ಸ್ಥಳಗಳಲ್ಲಿ ವೈಜ್ಞಾನಿಕವಾದ ಸುರಕ್ಷತಾ ವೇಗ ನಿಯಂತ್ರಕ ಕ್ರಮಗಳಿಗೆ ಮುಂದಾಗಬೇಕು ಎಂದರು.

ಹೆದ್ದಾರಿ ರಸ್ತೆಗಳಲ್ಲಿ ದುರಸ್ತಿ ಕೆಲಸಗಳನ್ನು ಶೀಘ್ರವಾಗಿ ಮುಗಿಸಬೇಕು. ನಗರ ಪಟ್ಟಣ ಪ್ರದೇಶಗಳಲ್ಲಿ ಸಂಚಾರ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಸಿಗ್ನಲ್‌ಗಳಲ್ಲಿ ರೋಡ್ ಮಾರ್ಕಿಂಗ್, ಡಿವೈಡರ್‌ಗಳಿಗೆ ಬಣ್ಣ ಬಳಿಯುವುದು, ವಾಹನಗಳ ನಿಲುಗಡೆಗೆ ಸ್ಥಳ ಗುರುತಿಸಿ ಅದರ ಪ್ರಕಾರವೇ ವಾಹನಗಳು ನಿಲುಗಡೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಮಾತನಾಡಿ, ಅಪಘಾತಗಳ ಸಂಖ್ಯೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಬ್ಲಾಕ್‌ಸ್ಪಾಟ್‌ಗಳಲ್ಲಿ ತುರ್ತಾಗಿ ಅಗತ್ಯವಿರುವ ಕೆಲಸ ನಿರ್ವಹಿಸಬೇಕಿದೆ. ರಸ್ತೆ ಸುರಕ್ಷತೆಗೆ ನಗರ, ಪಟ್ಟಣ ಪ್ರದೇಶಗಳಲ್ಲಿಯೂ ಇಲಾಖಾ ವತಿಯಿಂದ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಸರಕು ಸಾಗಾಣಿಕೆ ವಾಹನಗಳ ನಿಲುಗಡೆಗಾಗಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಡಿವೈಎಸ್‌ಪಿ ಅನ್ಸರ್ ಅಲಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಎಸ್.ಪಿ. ಮಹೇಶ್, ತಾಂತ್ರಿಕ ಸಹಾಯಕರಾದ ರಾಮಸ್ವಾಮಿ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್‌ಕುಮಾರ್, ಪ್ರಭಾರ ಸಾರಿಗೆ ಅಧಿಕಾರಿ ಗಾಯಿತ್ರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ.ವಿ. ವೆಂಕಟಲಕ್ಷ್ಮಿ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net