ಕೃಷಿ ಅಧಿಕಾರಿಗಳೊಂದಿಗೆ ಡಿಸಿ ಸಭೆ

DC MEETING NALEEN ATUL AGRICULTURE SCHEME KOPPAL
ಕೊಪ್ಪಳದಲ್ಲಿ ಡಿಸಿ ನಲಿನ್ ಅತುಲ್ ಅಧ್ಯಕ್ಷತೆಯಲ್ಲಿ ಬುಧವಾರ ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ನಡೆಯಿತು. ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ,ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಪಶು ಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಪಿ.ಮಲ್ಲಯ್ಯ ಇದ್ದರು.
Published on

ಕೊಪ್ಪಳ:ಬರಗಾಲ ಎದುರಾಗಿದ್ದು, ನೀರವಾರಿ ಸೌಲಭ್ಯ ಇರುವ ರೈತರಿಗೆ ಸೂಕ್ಷ್ಮ, ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಪಿಎಂ ಕೃಷಿ ಸಿಂಚಾಯಿ ಯೋಜನೆ ಸಮಪರ್ಕ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಕೃಷಿ ಅಧಿಕಾರಿಗಳಿಗೆ ನಿರ್ದೇಶಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕೃಷಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಯೋಜನೆಯಡಿ 5 ಎಕರೆವರೆಗೆ ಶೇ.90ರಷ್ಟು ಸಬ್ಸಿಡಿಯಲ್ಲಿ ರೈತರಿಗೆ ಸೂಕ್ಷ್ಮ, ಹನಿ ನೀರಾವರಿ ಸೌಲಭ್ಯ ಕಲ್ಪಿಸಬಹುದು. ಈ ನಿಟ್ಟಿನಲ್ಲಿ ಅರ್ಹ ರೈತರಿಗೆ ಯೋಜನೆ ಲಾಭ ಕೊಡಿಸಿ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 1,56,633 ರೈತರು ನೋಂದಣಿ ಮಾಡಿಕೊಂಡಿದ್ದಾರೆ.

ಈ ಪೈಕಿ 26,351 ರೈತರು ಇ-ಕೆವೈಸಿ ಮಾಡಿಸಿಕೊಂಡಿಲ್ಲ. ಅವರಿಗೆ ಮಾಡಿಸಿಕೊಳ್ಳಲು ಮಾಹಿತಿ ನೀಡಿ. ಬೆಳೆವಿಮೆಗೆ ನೋಂದಾಯಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸಿ. ವಿಮಾ ಸಂಸ್ಥೆಯವರೂ ಪ್ರಚಾರ ನಡೆಸಿ. ಇಲಾಖೆ ಯೋಜನೆ ಪಡೆಯಲು ಅನ್ನದಾತರು ಎಫ್‌ಐಡಿ ಹೊಂದಬೇಕು.

ವಿವರಗಳನ್ನು ಲಿಂಕ್ ಮಾಡಿಸಬೇಕು. ಗುರಿ ನಿಗದಿಪಡಿಸಿ ಪ್ರಗತಿ ಸಾಧಿಸಿ. ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಲು ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಲೀಡ್ ಬ್ಯಾಂಕ್ ಮ್ಯಾನೇಜರ್ ಮೂಲಕ ಸಮಸ್ಯೆ ಸರಿಪಡಿಸುವಂತೆ ಸೂಚಿಸಿದರು.

ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಮಾತನಾಡಿ, ಮುಂಗಾರು, ಹಿಂಗಾರು ಮಳೆ ಕೊರತೆಯಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹವಿದೆ. ಮುಂಗಾರಿನಲ್ಲಿ 2.50ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

ಬೆಳೆ ಸಮೀಕ್ಷೆ ಕಾರ್ಯವೂ ಪೂರ್ಣಗೊಂಡಿದೆ. ಪಿಎಂ ಕೃಷಿ ಸಿಂಚಾಯಿ ಯೋಜನೆಯಡಿ ಪ್ರಸಕ್ತ ವರ್ಷ 4,601 ರೈತರನ್ನು ಯೋಜನೆಗೆ ಒಳಪಡಿಸಲಾಗವುದು. 7.76 ಕೋಟಿ ರೂ. ಸಹಾಯಧನ ಗುರಿ ನಿಗದಿಪಡಿಸಲಾಗಿದೆ.

2019-20 ರಿಂದ 2022-23 ವರೆಗಿನ ಬೆಳೆವಿಮೆಯಲ್ಲಿ 2,162 ರೈತರ ಖಾತೆಗೆ ಆಧಾರ ಸೀಡಿಂಗ್ ಆಗದ ಕಾರಣ ಹಣ ಬಂದಿಲ್ಲ. ಈ ಬಗ್ಗೆ ಲೀಡ್ ಬ್ಯಾಂಕ್‌ಗೆ ಮಾಹಿತಿ ನೀಡಿದ್ದೇವೆ. ಪ್ರಸಕ್ತ ಸಾಲಿನಲ್ಲಿ 6 ರೈತ ಆತ್ಮಹತ್ಯೆ ಪ್ರಕರಗಳಾಗಿವೆ. ಒಂದು ಪ್ರಕರಣ ಬಾಕಿ ಇದೆ ಎಂದರು.

ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಪಶು ಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಪಿ.ಮಲ್ಲಯ್ಯ, ರೇಷ್ಮೆ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net