

ಮಂಡ್ಯ: ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊನ್ನಗಾನಹಳ್ಳಿ ಮಠ ಗ್ರಾಮದಲ್ಲಿ ಸರ್ವೇ ನಂ.19ರಲ್ಲಿ 4 ಎಕರೆ ಜಮೀನು ಆರ್‌ಟಿಸಿಯಲ್ಲಿ ಸರ್ಕಾರಿ ಜಮೀನು ಎಂದು ನಮೂದಾಗಿದ್ದರೆ ಸ್ಮಶಾನಕ್ಕೆ ಕಾಯ್ದಿರಿಸುವಂತೆ ತಿಳಿಸಿದರು.
ಉಪವಿಭಾಗಾಧಿಕಾರಿ, ತಹಸೀಲ್ದಾರ್ ಕೋರ್ಟ್‌ಗಳಲ್ಲಿರುವ ಪ್ರಕರಣಗಳ ವಿಲೇವಾರಿ ಕುರಿತಂತೆ ಪರಿಶೀಲನೆ ನಡೆಸಲಾಗುತ್ತಿದೆ. 10 ವರ್ಷಕ್ಕಿಂತ ಹಳೆಯ ಪ್ರಕರಣಗಳು ಬಾಕಿ ಇದ್ದಲ್ಲಿ ಪರಿಶೀಲಿಸಲಾಗುವುದು. ಪಿಟಿಸಿಎಲ್ ಪ್ರಕರಣಗಳಿದ್ದಲ್ಲಿ ಆದ್ಯತೆ ಮೇಲೆ ವಿಲೇವಾರಿ ಮಾಡಿ. ಗ್ರಾಮಮಟ್ಟದಲ್ಲಿ ಅಂಬೇಡ್ಕರ್ ಭವನ ಅಪೂರ್ಣ ಕಾಮಗಾರಿಗಳಿದ್ದಲ್ಲಿ ಸರ್ಕಾರಕ್ಕೆ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ. ಅಂತೆಯೇ ಪೂರ್ಣಗೊಂಡಿರುವ ಭವನಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಬೇಕು. ಇದರಿಂದ ಭವನ ಬಳಕೆ ಬರಲಿದೆ ಎಂದು ಹೇಳಿದರು.
ಶ್ರೀರಂಗಪಟ್ಟಣ ತಾಲೂಕು ಕೆಆರ್‌ಎಸ್ ಅಣೆಕಟ್ಟು ಪಕ್ಕದ ಪೆಂಚಲಾ ಭೋವಿ ಫೈಲ್ ಗ್ರಾಮದಲ್ಲಿ ವಾಸವಿರುವ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಸಂಬಂಧ ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ತಹಸೀಲ್ದಾರ್ ಹಾಗೂ ಡಿಡಿಎಲ್ಆರ್ ಅವರು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಬೇಕು. ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದವರು ನಿವೇಶನ ಹಾಗೂ ವಸತಿಗಾಗಿ ಅರ್ಜಿ ಸಲ್ಲಿಸಿರುವವರು, ಸೌಲಭ್ಯ ಪಡೆದವರು ಹಾಗೂ ಪಡೆದುಕೊಳ್ಳದಿರುವ ವಿವರ ಸಿದ್ದಪಡಿಸಿ. ಇದರಿಂದ ಕಾರ್ಯಕ್ರಮ ರೂಪಿಸಲು ಸಾಧ್ಯ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಕೊಳವೆ ಬಾವಿ ಘಟಕ ನಿರ್ಮಾಣ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ ಎಂದು ಸಭೆಯಲ್ಲಿ ದೂರು ಕೇಳಿಬಂದಾಗ ಪ್ರತಿಕ್ರಿಯಿಸಿದ ಡಿಸಿ, ಈ ಸಂಬಂಧ 20 ದಿನದೊಳಗಾಗಿ ಪರಿಶೀಲಿಸಿ ವರದಿ ನೀಡುವಂತೆ ಆರ್‌ಡಿಪಿಆರ್ ಕಾರ್ಯಪಾಲಕ ಇಂಜಿನಿಯರ್‌ಗೆ ಸೂಚಿಸಿದರು. ಅಂತೆಯೇ ಲೋಕೋಪಯೋಗಿ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನದಡಿ ಕಳೆದ 3 ವರ್ಷಗಳಿಂದ ಕೈಗೊಂಡಿರುವ ಕಾಮಗಾರಿಗಳ ವರದಿಯನ್ನು ಮುಂದಿನ ಸಭೆಗೆ ಒದಗಿಸಬೇಕು. ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಯಾವುದೇ ಜಾತಿ ಬೇಧವಿಲ್ಲದೇ ಎಲ್ಲರಿಗೂ ಮುಕ್ತ ಅವಕಾಶವಿದೆ. ಈ ಬಗ್ಗೆ ನಾಮಫಲಕ ಅನಾವರಣಗೊಳಿಸಲು ಜಿಲ್ಲಾಡಳಿತದಿಂದ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ನರೇಗಾ ಯೋಜನೆಯಡಿ ಜಿಲ್ಲೆಯ 267 ಸ್ಮಶಾನ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಅಂಗನವಾಡಿ ನಿರ್ಮಾಣ ಮಾಡಲು ಸ್ಥಳವಿಲ್ಲದ ಗ್ರಾಮ ಹಾಗೂ ಶಾಲೆಗಳಲ್ಲಿ ಸ್ಥಳಾವಕಾಶ ಇದ್ದರೆ ನಿರ್ಮಾಣ ಮಾಡಿ. ಶಾಲೆಯಲ್ಲೂ ಸ್ಥಳ ಇಲ್ಲದಿದ್ದಲ್ಲಿ ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪವಿಭಾಗಾಧಿಕಾರಿಗಳಾದ ನಂದೀಶ್, ಶಿವಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ಇತರರಿದ್ದರು. ಸಭೆಯಲ್ಲಿ ಭಾಗವಹಿಸಿದ ವಿವಿಧ ಸಂಘಟನೆಗಳ ಮುಖಂಡರು ಸಮುದಾಯಕ್ಕೆ ಸಂಬಂಧಿಸಿದ ಕುಂದುಕೊರತೆಗಳ ಬಗ್ಗೆ ಚರ್ಚಿಸಿದರು.