

ಮಂಡ್ಯ: ಮಂಡ್ಯ, ಮದ್ದೂರು ತಾಲೂಕಿನಲ್ಲಿ ವಸತಿ ಶಾಲೆಗಳ ನಿರ್ಮಾಣಕ್ಕೆ ನಿವೇಶನ ಮಂಜೂರಾಗಿದೆ. ಅದರಂತೆ ಉಳಿದ ತಾಲೂಕಿನಲ್ಲಿಯೂ ನಿವೇಶನ ಗುರುತಿಸಲು ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಅಶ್ವಥಿ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ(ದೌರ್ಜನ್ಯ ಪ್ರತಿಬಂಧ) ಕಾಯ್ದೆ -1989 ಹಾಗೂ ನಿಯಮಗಳನ್ನು ಅನುಷ್ಠಾನಗೊಳಿಸುವ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮದ್ದೂರು ತಾಲೂಕಿನ ಕೊಪ್ಪ, ಚಿಕ್ಕರಸಿನಕೆರೆ, ಮಂಡ್ಯ ತಾಲೂಕಿನ ದುದ್ದ ಗ್ರಾಮಗಳಲ್ಲಿ ವಸತಿ ಶಾಲೆ ನಿರ್ಮಿಸಲು ನಿವೇಶನ ಮಂಜೂರಾಗಿದೆ. ಅದೇ ರೀತಿ ಇನ್ನಿತರ ತಾಲೂಕಿನ ಗ್ರಾಮದಲ್ಲೂ ವಸತಿ ಶಾಲೆಗಳ ನಿರ್ಮಾಣಕ್ಕೆ ನಿವೇಶನ ದೊರಕಿಸಿಕೊಡಬೇಕು. ಜಿಲ್ಲೆಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳು ಕ್ರಮವಹಿಸಬೇಕು. ಪ್ರಮುಖವಾಗಿ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಕೇಂದ್ರ ಹಾಗೂ ಎಲ್ಲ ತಾಲೂಕು ಕೇಂದ್ರಗಳಲ್ಲಿ ಬುದ್ಧ ವಿಹಾರ ಕೇಂದ್ರ ನಿರ್ಮಿಸುವ ಕುರಿತು ಚರ್ಚಿಸಿ ಇರುವ ಗೊಂದಲವನ್ನು ಶೀಘ್ರದಲ್ಲಿಯೇ ಪರಿಹರಿಸಬೇಕು. ತಾಲೂಕಿನಲ್ಲಿ ಪರಿಶೀಲಿಸಿ 3 ರಿಂದ 5 ಎಕರೆ ಜಮೀನನ್ನು ಮಂಜೂರು ಮಾಡುವಂತೆ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‌ಗಳಿಗೆ ಸೂಚಿಸಿದರು.
ಮಂಡ್ಯ ತಾಲೂಕಿನ ಹುಳ್ಳೇನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಮೀಸಲಿರಿಸಿದ್ದ ನಿವೇಶನದಲ್ಲಿ ಗುಡಿಸಲುಗಳಿವೆ. ಅರ್ಹ ಗುಡಿಸಲಿನ ನಿವಾಸಿಗಳಿಗೆ ಬದಲಿ ನಿವೇಶನ ಒದಗಿಸಿ ಗುಡಿಸಲನ್ನು ತೆರವುಗೊಳಿಸುವ ಸಂಬಂಧ ವಿಶೇಷ ಗ್ರಾಮ ಸಭೆ ಕರೆದು ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.
ಜಿಲ್ಲೆಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಲ್ಲಿ ಕುರಿ ಮತ್ತು ಉಣ್ಣೆ ಸಹಕಾರ ಸಂಘದಲ್ಲಿ ಇರುವ ಗೊಂದಲವನ್ನು ಸರಿಪಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಯಾವುದೇ ತೊಂದರೆಯಾಗದ ರೀತಿ ಸಮಿತಿಯಲ್ಲಿ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕೆಆರ್‌ಐಡಿಎಲ್ ಸಂಸ್ಥೆಗೆ ವಹಿಸಲಾಗಿರುವ ಡಾ.ಅಂಬೇಡ್ಕರ್ ಭವನಗಳ ನಿರ್ಮಾಣ ಕಾಮಗಾರಿಯನ್ನು ತುರ್ತಾಗಿ ಕೈಗೊಂಡು ಪೂರ್ಣಗೊಳಿಸಬೇಕು. ಕಾಮಗಾರಿ ಮತ್ತು ಅನುದಾನದ ವಿವರದ ಜತೆ ಮುಕ್ತಾಯಗೊಂಡ ಹಾಗೂ ಬಾಕಿ ಇರುವ ಕಾಮಗಾರಿಗಳ ವಿವರವನ್ನು ಮುಂದಿನ ಸಭೆಗೆ ವರದಿ ಸಲ್ಲಿಸಬೇಕು ಎಂದರು.
ಸಭೆಯಲ್ಲಿ ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್, ಉಪವಿಭಾಗಾಧಿಕಾರಿಗಳಾದ ಬಿ.ಸಿ.ಶಿವಾನಂದಮೂರ್ತಿ, ಆರ್.ಐಶ್ವರ್ಯಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ರಂಗೇಗೌಡ, ಸಮಿತಿಯ ಸದಸ್ಯರಾದ ವೆಂಕಟಗಿರಿಯಯ್ಯ, ಎನ್.ಆರ್.ಚಂದ್ರಶೇಖರ್, ಅಮ್ಜದ್ ಪಾಷ ಸೇರಿದಂತೆ ಇತರರಿದ್ದರು.