

ಮಂಡ್ಯ: ಆರೋಗ್ಯ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ನ.15ರಿಂದ 28ರ ವರೆಗೆ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ 5 ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ಭೇಟಿ ನೀಡಿ, ಮಕ್ಕಳಲ್ಲಿ ಕಂಡುಬರುವ ಅತಿಸಾರ ತಡೆ ಬಗ್ಗೆ ಪಾಲಕರಿಗೆ ಜಾಗೃತಿ ಮೂಡಿಸಬೇಕು. ವೈಯಕ್ತಿಕ ಸ್ವಚ್ಛತೆ ಹಾಗೂ ಆಹಾರ ಸೇವನೆಗೂ ಮುನ್ನ ಕೈತೊಳೆಯುವ ಅಭ್ಯಾಸದ ಬಗ್ಗೆ ತಿಳಿಸಬೇಕು ಎಂದು ಹೇಳಿದರು.
ಮಕ್ಕಳಲ್ಲಿ ಅತಿಸಾರ ಉಂಟಾದ ಸಂದರ್ಭದಲ್ಲಿ ಒಆರ್‌ಎಸ್ ಹಾಗೂ ಜಿಂಕ್ ಮಾತ್ರೆ ಕೊಡಬೇಕು. ಪಾಲಕರಿಗೆ ಒಆರ್‌ಎಸ್ ತಯಾರಿಸುವ ವಿಧಾನ ಹಾಗೂ ಮಕ್ಕಳಿಗೆ ನೀಡುವ ಕ್ರಮಗಳ ಬಗ್ಗೆ ತರಬೇತಿ ನೀಡಬೇಕು. ಅತಿಸಾರ ಉಂಟಾಗಲು ಕಾರಣ, ತಡೆಗಟ್ಟುವ ರೀತಿ ಕುರಿತು ಸಾರ್ವಜನಿಕರಿಗೆ ಜಾಥಾ ಆಯೋಜಿಸಿ ತಿಳಿಸಬೇಕು. ಸ್ಥಳೀಯ ಸಂಸ್ಥೆಯ ಸಹಯೋಗದೊಂದಿಗೆ ಕಸ ಸಂಗ್ರಹಿಸುವ ವಾಹನಗಳ ಮೂಲಕ ಪ್ರಚಾರ ಕೈಗೊಳ್ಳಿ. ಸ್ಲಂಗಳು, ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ವಾಸಿಸುವ ಸ್ಥಳಗಳನ್ನು ಗುರುತಿಸಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಡಾ.ಆಶಾಲತಾ, ಡಾ.ಸೋಮಶೇಖರ್ ಇದ್ದರು.