

ಮಂಡ್ಯ: ಮಳೆ, ಗುಡುಗು, ಸಿಡಿಲು ಸಂದರ್ಭದಲ್ಲಿ ಉಂಟಾಗುವ ತೊಂದರೆಗಳ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಲು ಹಾಗೂ ತಕ್ಷಣ ಕಾರ್ಯಪ್ರವೃತ್ತರಾಗಿ ಕ್ರಮಕೈಗೊಳ್ಳಲು ಅನುಕೂಲವಾಗುವಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಳೆಯಿಂದ ಎದುರಾಗಬಹುದಾದ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಅಗತ್ಯ ಸಿದ್ಧತೆ ಮಾಡಿಕೊಳ್ಳಿ. ಈ ವಿಷಯದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷೃ ವಹಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಳೆದ 5 ವರ್ಷದಲ್ಲಿ ಮಳೆಯಿಂದ ಉಂಟಾಗಿರುವ ತೊಂದರೆಗಳ ಬಗ್ಗೆ ಅವಲೋಕನ ಮಾಡಬೇಕು. ಜೋರು ಮಳೆಯಾದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಸನ್ನದ್ಧರಾಗಬೇಕು. ತಮ್ಮ ವ್ಯಾಪ್ತಿಯ ಸರ್ಕಾರಿ ಶಾಲೆ, ಆಸ್ಪತ್ರೆ, ಅಂಗನವಾಡಿ ಹಾಗೂ ಇನ್ನಿತರೆ ಕಟ್ಟಡ, ಸೇತುವೆ, ವಿದ್ಯುತ್ ಕಂಬಗಳು ಶಿಥಿಲಗೊಂಡಿದ್ದಲ್ಲಿ ಯಾವುದೇ ಹಾನಿಯಾಗದಂತೆ ಮೊದಲೇ ಕ್ರಮಗಳನ್ನು ಕೈಗೊಳ್ಳಿ. ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಚರಂಡಿ ಹಾಗೂ ಯುಜಿಡಿ ಗಳಲ್ಲಿ ನೀರು ಹರಿಯುವಿಕೆಗೆ ತೊಂದರೆಯಾಗದಂತೆ ಕಸ, ಪ್ಲಾಸ್ಟಿಕ್ ವಸ್ತುಗಳನ್ನು ತೆರವುಗೊಳಿಸಿ. ಮಳೆ ಬಂದ ಸಂದರ್ಭದಲ್ಲಿ ಅವುಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ. ಅರಣ್ಯ ಇಲಾಖೆ ಅವರು ಒಣಗಿದ ಮರದ ಕೊಂಬೆಗಳನ್ನು ತೆರವುಗೊಳಿಸಲು ತುರ್ತು ಕ್ರಮ ವಹಿಸಬೇಕು. ಅಗ್ನಿ ಶಾಮಕ ದಳದವರು ತಮ್ಮಲ್ಲಿರುವ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಬೇಕಿರುವ ಸಲಕರಣೆಗಳ ಪರಿಶೀಲಿಸಿಕೊಳ್ಳಿ ಎಂದು ಸೂಚಿಸಿದರು.
ಮಳೆ ಕುರಿತಂತೆ ಹವಾಮಾನ ಇಲಾಖೆಯು ರೆಡ್, ಆರೆಂಜ್ ಹಾಗೂ ಯಲ್ಲೋ ಅಲರ್ಟ್ ಕುರಿತಂತೆ ಮಾಹಿತಿಗಳನ್ನು ನೀಡುತ್ತಿರುತ್ತದೆ. ಅವುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಯಾವುದೇ ಅವಘಡಗಳು ಸಂಭವಿಸಿದಂತೆ ನೋಡಿಕೊಳ್ಳಬೇಕು. ಮಳೆಯಿಂದ ಹಾನಿಯಾದ ಸಂದರ್ಭದಲ್ಲಿ ಕಂದಾಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ 24 ಗಂಟೆಯೊಳಗಾಗಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕ್ರಮಗಳನ್ನು ಪ್ರಾರಂಭಿಸಿರಬೇಕು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆ ಸಂಬಂಧಿಸಿದಂತೆ ಅನುದಾನದ ಕೊರತೆ ಇಲ್ಲ. ತಹಸೀಲ್ದಾರ್ ಖಾತೆಯಲ್ಲಿ 40 ರಿಂದ 50 ಲಕ್ಷ ರೂ ಹಾಗೂ ಜಿಲ್ಲಾಧಿಕಾರಿ ಖಾತೆಯಲ್ಲಿ 2.96 ಕೋಟಿ ರೂ ಇರುತ್ತದೆ. ಈ ಹಿಂದೆ ಉಂಟಾದ ಮನೆ ಹಾನಿಗೆ ಸಂಬಂಧಿಸಿದಂತೆ ಮೊದಲ ಹಂತದ ಪರಿಹಾರವನ್ನು ಫಲಾನುಭವಿಗಳು ಪಡೆದುಕೊಂಡಿದ್ದಾರೆ. ನಂತರ ಎರಡನೇ ಹಂತದ ಪರಿಹಾರಕ್ಕಾಗಿ ನಿಗದಿತ ಸಮಯಕ್ಕೆ ಬೇಡಿಕೆ ಬಂದಿಲ್ಲ. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಈ ಕುರಿತಂತೆ ಪರಿಶೀಲನೆ ನಡೆಸಿ ಅವರಿಗೆ ಯಾವುದೇ ತೊಂದರೆಯಿದ್ದಲ್ಲಿ ಪರಿಹರಿಸುವಂತೆ ತಿಳಿಸಿದರು.
ಏಪ್ರಿಲ್ನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮೇ ಮಾಹೆಯಲ್ಲಿ ವಾಡಿಕೆಗಿಂತೆ ಹೆಚ್ಚು ಮಳೆಯಾಗಿದ್ದರೂ, ಕೆಲವು ಭಾಗಗಳಲ್ಲಿ ಮಳೆಯ ಕೊರತೆ ಇದೆ. ಕೃಷಿ ಇಲಾಖೆ ಅವರು ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಪಶುಸಂಗೋಪನಾ ಇಲಾಖೆ ಅವರು ಮೇವಿನ ಕೊರತೆ ಉಂಟಾಗದಂತೆ ಇರುವ ದಾಸ್ತಾನು ಪರಿಶೀಲಿಸಿಕೊಳ್ಳಬೇಕು. ಇನ್ನು ಮಾ.1ರಿಂದ ಮೇ.25ರವರೆಗೆ ಇಬ್ಬರು ವ್ಯಕ್ತಿ, 2 ದೊಡ್ಡ ಪ್ರಾಣಿ, 17 ಸಣ್ಣ ಪ್ರಾಣಿ ಪ್ರಾಣ ಹಾನಿಯಾಗಿದೆ. ಅಂಎಯೇ 63 ಮನೆ ಭಾಗಶಃ ಹಾನಿ ಹಾಗೂ 41.19 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿರುತ್ತದೆ. 253 ವಿದ್ಯುತ್ ಕಂಬ, 11 ಟ್ರಾನ್ಸ್‌ಫಾರ್ಮರ್ ದುರಸ್ತಿಯಾಗಿದ್ದು, ಪರಿಹಾರ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾ ಪಂಚಾಯಿಸಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಮಳೆಯ ಸಂದರ್ಭದಲ್ಲಿ ಈ ಹಿಂದೆ ಸಾರ್ವಜನಿಕರಿಗೆ ಉಂಟಾಗಿರುವ ತೊಂದರೆಗಳ ಬಗ್ಗೆ ತಿಳಿದುಕೊಂಡರೆ ಈ ಬಾರಿ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಬಹುದು. ಆದ್ದರಿಂದ ಮಳೆಯಿಂದ ತೊಂದರೆ ಉಂಟಾಗುವ ಸ್ಥಳಗಳಿಗೆ ಮೊದಲೇ ಭೇಟಿ ನೀಡಿ ಮುನ್ನೆಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳಿ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಾಗರಾಜು, ಡಿಡಿಪಿಐ ಎಸ್.ಟಿ.ಜವರೇಗೌಡ ಇತರರಿದ್ದರು.