

ಮಂಡ್ಯ: ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ಅಧ್ಯಕ್ಷರೂ ಆದ ನಿವೃತ್ತ ಐಎಎಸ್ ಅಧಿಕಾರಿ ಟಿ.ಎಂ.ವಿಜಯ್ ಭಾಸ್ಕರ್ ಹಾಗೂ ಸಲಹೆಗಾರ ನಿವೃತ್ತ ಐಎಎಸ್ ಅಧಿಕಾರಿ ಪ್ರಸನ್ನಕುಮಾರ್ ಮೇ.22 ರಿಂದ 24 ರವರೆಗೆ ಜಿಲ್ಲೆಯ ವಿವಿಧ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಯೋಗವು ಇಲಾಖೆಗೆ ಸಂಬಂಧಿಸಿದ ಕಾರ್ಯವಿಧಾನ ಸಿಬ್ಬಂದಿ ವಿವರ, ಇಲಾಖೆಯಲ್ಲಿ ಕೆಲಸ ನಿರ್ವಹಿಸಲು ಇರುವ ತೊಂದರೆ, ಸರ್ಕಾರದಿಂದ ಬೇಕಿರುವ ವ್ಯವಸ್ಥೆ, ಅನುದಾನ, ಕಾಮಗಾರಿ, ಸಾರ್ವಜನಿಕರಿಗೆ ದೊರೆಯುವ ಸೌಲಭ್ಯದ ಬಗ್ಗೆ ಮಾಹಿತಿ ಪಡೆಯಲಿದೆ. ಅಧಿಕಾರಿಗಳು ಮಾಹಿತಿಯನ್ನು ಸಿದ್ಧಪಡಿಸಿಕೊಂಡು ಆಯೋಗದ ಅಧ್ಯಕ್ಷರು ಕೇಳುವ ವಿವರಗಳಿಗೆ ನಿಖರವಾದ ಮಾಹಿತಿ ಒದಗಿಸಬೇಕು ಎಂದರು.
22ರಂದು ಮಧ್ಯಾಹ್ನ 1.40ಕ್ಕೆ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಗೆ ಭೇಟಿ ನೀಡಲಿದ್ದಾರೆ. 2.30ಕ್ಕೆ ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶದ ಕಾರ್ಯಪಾಲಕರ ಇಂಜಿನಿಯರ್/ಸಹಾಯಕ ಕಾರ್ಯಪಾಲಕರ ಇಂಜಿನಿಯರ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಹಾಗೂ ನೀರು ಬಳಕೆದಾರರ ಸಂಘಗಳೊಂದಿಗೆ ಚರ್ಚೆ ನಡೆಸಿ ಆಡಳಿತ ಸುಧಾರಣೆಗಳ ಬಗ್ಗೆ ಸಲಹೆಗಳನ್ನು ಪಡೆಯಲಿದ್ದಾರೆ. ಸಂಜೆ 4ಕ್ಕೆ ಸಣ್ಣ ನೀರಾವರಿ ವಿಭಾಗೀಯ ಮತ್ತು ಉಪವಿಭಾಗೀಯ ಕಚೇರಿಗೆ ಭೇಟಿ ನೀಡಿ ಕೆರೆ/ನೀರು ಬಳಕೆದಾರರ ಸಂಘದೊಂದಿಗೆ ಚರ್ಚಿಸಿ ಆಡಳಿತ ಸುಧಾರಣೆಯ ಬಗ್ಗೆ ಸಲಹೆ ಪಡೆಯಲಿದ್ದಾರೆ. ಸಂಜೆ 5.30ಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಭೇಟಿ ನೀಡಿ ಸಣ್ಣ ಕೈಗಾರಿಕಾ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಆಡಳಿತ ಸುಧಾರಣೆಗಳ ಬಗ್ಗೆ ಸಲಹೆಗಳನ್ನು ಪಡೆಯಲಿದ್ದಾರೆ ಎಂದು ವಿವರಿಸಿದರು.
23ರಂದು ಬೆಳಗ್ಗೆ 10ಗಂಟೆಗೆ ಪಾಂಡವಪುರ ತಾಲೂಕು ಖಜಾನೆ, 11ಕ್ಕೆ ಅಬಕಾರಿ ಇಲಾಖೆಯ ಉಪ ಅಧೀಕ್ಷಕರ ಹಾಗೂ ನಿರೀಕ್ಷಕರ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಆಡಳಿತ ಸುಧಾರಣೆಯ ಬಗ್ಗೆ ಸಲಹೆ ಪಡೆಯಲಿದ್ದಾರೆ. 12ಕ್ಕೆ ಪಾಂಡವಪುರದ ತಾಲೂಕು ಮಟ್ಟದ ಅಂಕಿ ಅಂಶಗಳ ನಿರೀಕ್ಷಕರ ಕಚೇರಿ, ಮಧ್ಯಾಹ್ನ 1ಕ್ಕೆ ರಾಜೀವ್ ಗಾಂಧಿ ವಸತಿ ನಿಗಮಗಳಿಗೆ ಸಂಬಂಧಿಸಿದ ವಸತಿ ಯೋಜನೆಗಳ ಬಗ್ಗೆ(ತಾ.ಪಂ ಮತ್ತು ಪುರಸಭೆ) ಆಡಳಿತ ಸುಧಾರಣೆಗಳ ಬಗ್ಗೆ ಸಲಹೆ ಪಡೆಯಲಿದ್ದಾರೆ. 3.15ಕ್ಕೆ ಬೂಕನಕೆರೆ, ಸಣ್ಣ ನೀರಾವರಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ, 4.30ಕ್ಕೆ ಕೆ.ಆರ್ ಪೇಟೆ ಎಚ್‌ಎಲ್‌ಬಿಸಿ ಕಚೇರಿ ಹಾಗೂ 5.30ಕ್ಕೆ ತಾಲೂಕು ಮಟ್ಟದ ಅಂಕಿ ಅಂಶಗಳ ನಿರೀಕ್ಷಕರೊಂದಿಗೆ ಚರ್ಚಿಸಿ ಆಡಳಿತ ಸುಧಾರಣೆಯ ಬಗ್ಗೆ ಸಲಹೆ ಪಡೆಯಲಿದ್ದಾರೆ ಎಂದರು.
24ರಂದು ಬೆಳಗ್ಗೆ 10ಗಂಟೆಗೆ ಜಿಲ್ಲಾ ಅಂಕಿ ಅಂಶ ಸಂಗ್ರಹಾಣಾಧಿಕಾರಿಗಳ ಕಚೇರಿ, 11ಗಂಟೆಗೆ ಜಿಲ್ಲಾ ಖಜಾನೆ ಅಧಿಕಾರಿಗಳ ಕಚೇರಿ, ಮಧ್ಯಾಹ್ನ 12ಗಂಟೆಗೆ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿಗೆ ಭೇಟಿ ನೀಡಿ ರಾಜೀವ್ ಆವಾಸ ಯೋಜನೆ ಅನುಷ್ಟಾನದ ಬಗ್ಗೆ ವಸತಿ ಬಳಕೆದಾರರಿಂದ ಸಲಹೆಗಳನ್ನು ಪಡೆಯಲಿದ್ದಾರೆ. ಮಧ್ಯಾಹ್ನ 3.50ಕ್ಕೆ ನಾಗಮಂಗಲದ ಎಚ್‌ಎಲ್‌ಬಿಸಿ ಕಚೇರಿಗೆ ಭೇಟಿ ಹಾಗೂ ಪ್ರಧಾನ ಮಂತ್ರಿ ಆವಾಸ ಯೋಜನೆ ಫಲಾನುಭವಿಗಳ ಜತೆ ಚರ್ಚಿಸಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ವಿಶ್ವೇಶ್ವರಯ್ಯ ನಾಲೆಯ ಕಾರ್ಯಪಾಲಕ ಇಂಜಿನಿಯರ್ ನಾಗರಾಜು, ತಹಸೀಲ್ದಾರ್‌ಗಳಾದ ಸೌಮ್ಯ, ವಿಜಯ್‌ಕುಮಾರ್, ನರಸಿಂಹಮೂರ್ತಿ, ನಯಿಮ್ ಉನ್ನೀಸಾ ಇತರರಿದ್ದರು.