

ಮಂಡ್ಯ: ಕೆಶಿಪ್-3 ಯೋಜನೆಯಡಿ ಮದ್ದೂರು, ನಾಗಮಂಗಲ ಮತ್ತು ಕೆ.ಆರ್.ಪೇಟೆ ತಾಲೂಕಿನಲ್ಲಿ 77 ಕಿ.ಮೀ. ರಸ್ತೆ ಹಾದು ಹೋಗಲಿದೆ. ಈ ಹಿನ್ನೆಲೆಯಲ್ಲಿ 198 ಎಕರೆ ಖಾಸಗಿ ಜಮೀನು ಅವಶ್ಯವಿದೆ ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಶಿಪ್-3 ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನೇರ ಖರೀದಿಯಡಿ 121 ಎಕರೆ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ರಾಜ್ಯ ಹೆದ್ದಾರಿ ಕಾಯ್ದೆ-1964 ರ ಕಲಂ 19 ರನ್ವಯ ಒಟ್ಟು 59 ಎಕರೆ ಜಮೀನಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅವಾರ್ಡ್ ಅನುಮೋದನೆಯಾಗಿದ್ದು, ಎರಡೂ ಉಪವಿಭಾಗಗಳ ವ್ಯಾಪ್ತಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಬಾಕಿ ಉಳಿದಿರುವ ಸರ್ವೇ ನಂಬರ್/ಗ್ರಾಮಠಾಣಾ ಸ್ವತ್ತುಗಳಿಗೆ ಸಂಬಂಧಿಸಿದಂತೆ ರಾಜ್ಯ ಹೆದ್ದಾರಿ ಕಾಯ್ದೆ-1964 ರ ಕಲಂ 19 ರನ್ವಯ ಒಟ್ಟು 16 ಎಕರೆ ಜಮೀನಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪಾಂಡವಪುರ ಉಪವಿಭಾಗ ವ್ಯಾಪ್ತಿಯಲ್ಲಿ ದರ ನಿರ್ಧರಣೆ ಅನುಮೋದನೆಯಾಗಿದ್ದು, ಅವಾರ್ಡ್‌ಗೆ ಪ್ರಸ್ತಾವನೆ ಸಲ್ಲಿಸಲು ಬಾಕಿಯಿದೆ. ಪಾಂಡವಪುರ ಉಪವಿಭಾಗ ವ್ಯಾಪ್ತಿಯ ದರ ನಿರ್ಧರಣೆ ಪ್ರಸ್ತಾವನೆಯನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಯೋಜನೆಯನ್ನು ತುರ್ತಾಗಿ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ದಾಖಲಾತಿ ಪಡೆದುಕೊಂಡು ಪರಿಹಾರ ಪಾವತಿಸಬೇಕು. ಕೈಬಿಟ್ಟ ಪ್ರಕರಣಗಳಲ್ಲಿ ಸಂಬಂಧಿಸಿದ ಭೂದಾಖಲೆಗಳ ಸಹಾಯಕ ನಿರ್ದೇಶಕರು ತುರ್ತಾಗಿ ಜಂಟಿ ಸರ್ವೇ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪವಿಭಾಗಾಧಿಕಾರಿಗಳಾದ ಬಿ.ಸಿ.ಶಿವಾನಂದಮೂರ್ತಿ, ಐಶ್ವರ್ಯಾ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಸ್ವಾಮಿಗೌಡ ಇತರರಿದ್ದರು.