

ಮಂಡ್ಯ: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ತಮ್ಮ ಕ್ಷೇತ್ರಕ್ಕೆ ಮೀಸಲಿರುವ ಕಬ್ಬನ್ನು ಮಾತ್ರ ಕಟಾವು ಮಾಡಬೇಕು ಎಂದು ಕಾರ್ಖಾನೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಎಸ್.ಅಶ್ವಥಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಹಂಗಾಮು ಕಬ್ಬು ನುರಿಸುವಿಕೆ ಹಾಗೂ ಹಣ ಪಾವತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಂದು ಕಾರ್ಖಾನೆಗೆ ನಿಗದಿಪಡಿಸಿರುವ ಕಬ್ಬನ್ನು ಮತ್ತೊಂದು ಕಾರ್ಖಾನೆಯವರು ಕಟಾವು ಮಾಡಬಾರದು. ಮೈಶುಗರ್ ಪ್ರಾರಂಭವಾಗಿದ್ದು, ಈ ಕಾರ್ಖಾನೆ ವ್ಯಾಪ್ತಿಗೆ ಮೀಸಲಿರುವ ಕಬ್ಬನ್ನು ಬೇರೆ ಕಾರ್ಖಾನೆಯವರು ಕಟಾವು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಮೈಶುಗರ್ ಕಾರ್ಖಾನೆ ಕಬ್ಬು ನುರಿಸುವ ಕೆಲಸಕ್ಕೆ ತೊಂದರೆಯಾಗುತ್ತಿದೆ. ಕಬ್ಬು ಕಟಾವು ಮಾಡುತ್ತಿದ್ದರೆ ತಕ್ಷಣವೇ ನಿಲ್ಲಿಸಬೇಕು. ಮೈಶುಗರ್ ಕಾರ್ಖಾನೆಯವರೇ ಕಟಾವು ಮುಂದುವರಿಸಲಿದ್ದಾರೆ ಎಂದರು.
ಜೂನ್, ಜುಲೈ ವೇಳೆಯಲ್ಲಿ ಮೈಶುಗರ್ ವ್ಯಾಪ್ತಿಯ ಕಬ್ಬನ್ನು ಬೇರೆ ಕಾರ್ಖಾನೆಯವರು ಕಟಾವು ಮಾಡುತ್ತಿದ್ದರು. ಕಾರ್ಖಾನೆ ಪ್ರಾರಂಭವಾಗದ ಹಿನ್ನೆಲೆ ಹಾಗೂ ರೈತರ ಹಿತದೃಷ್ಟಿಯಿಂದ ಕಟಾವಿಗೆ ಅವಕಾಶ ನೀಡಲಾಗಿತ್ತು. ಈಗ ಅದನ್ನು ಮುಂದುವರಿಸಬಾರದು. ಕಾರ್ಖಾನೆಯಲ್ಲಿ ಕಬ್ಬು ನುರಿಸುವಿಕೆಗೆ ಸಂಬಂಧಿಸಿದಂತೆ ನಿಗದಿಪಡಿಸಿರುವ ಗುರಿಯಂತೆ ಪ್ರತಿದಿನ ನಡೆಯಬೇಕು. ಕಡಿಮೆ ಗುರಿ ಸಾಧಿಸಿರುವ ಕಾರ್ಖಾನೆಗಳು ಕಬ್ಬು ನುರಿಸುವಿಕೆಯನ್ನು ಚುರುಕು ಮಾಡಬೇಕು. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
12 ರಿಂದ 14 ತಿಂಗಳು ಅವಧಿ ತುಂಬಿದ ಕಬ್ಬನ್ನು ಆದ್ಯತೆ ಮೇರೆಗೆ ಕಟಾವು ಮಾಡಬೇಕು. ಈ ಕುರಿತಂತೆ ಕಳೆದ ಬಾರಿ ಜಿಲ್ಲಾಡಳಿತಕ್ಕೆ ದೂರುಗಳು ಬಂದಿದ್ದವು. ಈ ಬಾರಿ ದೂರು ಬಾರದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಕಬ್ಬು ಕಟಾವು ಮಾಡಿದ 14 ದಿನದೊಳಗಾಗಿ ರೈತರಿಗೆ ಎಫ್‌ಆರ್‌ಪಿ ದರದಂತೆ ಹಣ ಪಾವತಿಸಬೇಕು. 14 ದಿನಗಳಿಂತ ಹೆಚ್ಚಿನ ಅವಧಿಯ ಹಣ ಪಾವತಿ ಮಾಡದೆ ಉಳಿಸಿಕೊಂಡಿದ್ದಲ್ಲಿ ಕೂಡಲೇ ಪಾವತಿಸಲು ಕ್ರಮ ವಹಿಸಬೇಕು ಎಂದರು.
ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಮೈಶುಗರ್ ಕಾರ್ಖಾನೆಯಲ್ಲಿ 5 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಆದರೆ ಬೇರೆ ಕಾರ್ಖಾನೆ ಅವರು ಮೈಶುಗರ್ ವ್ಯಾಪ್ತಿಯ ಕಬ್ಬು ಕಟಾವು ಮಾಡಿಕೊಂಡರೆ ತೊಂದರೆಯಾಗುತ್ತದೆ. ಆದ್ದರಿಂದ ಜಿಲ್ಲಾಡಳಿತದ ಸೂಚನೆಯನ್ನು ತಪ್ಪದೇ ಪಾಲಿಸಬೇಕು ಎಂದರು.
ಸಭೆಯಲ್ಲಿ ಮಂಡ್ಯ ಎಸಿ ಆರ್.ಐಶ್ವರ್ಯಾ, ತಹಸೀಲ್ದಾರ್ ಕುಂಇ ಅಹಮದ್, ಮೈಶುಗರ್ ವ್ಯವಸ್ಥಾಪಕ ನಿರ್ದೇಶಕ ಪಾಟೀಲ ಅಪ್ಪಾ ಸಾಹೇಬ, ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಕೃಷ್ಣಕುಮಾರ್, ಜಂಟಿ ಕೃಷಿ ನಿರ್ದೇಶಕ ವಿ.ಆರ್.ಅಶೋಕ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.