

ಮಂಡ್ಯ: ವಿದ್ಯುನ್ಮಾನ ಮತಯಂತ್ರಗಳ ಮೂಲಕ ಅರ್ಹ ಮತದಾರರು ಮತ ಚಲಾಯಿಸುವುದು ಹೇಗೆ ಮತ್ತು ಮತದಾನದ ಬಗ್ಗೆ ಖಾತರಿ ಪಡಿಸಿಕೊಳ್ಳವುದು ಹೇಗೆಂದು ಜಿಲ್ಲಾದ್ಯಂತ ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲ ತಾಲೂಕು ಕಚೇರಿಗಳಲ್ಲಿ ವಿದ್ಯುನ್ಮಾನ ಮತಯಂತ್ರ ಬಳಕೆ ಪ್ರಾತ್ಯಕ್ಷಿಕೆ ಕೊಠಡಿ ಹಾಗೂ ಸಂಚಾರ ವಿದ್ಯುನ್ಮಾನ ಮತಯಂತ್ರ ಬಳಕೆ ಪ್ರಾತ್ಯಕ್ಷಿಕೆ ನಡೆಸಬೇಕು. ಈ ಕೆಲಸಗಳಿಗೆ ಬೇಕಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸುವಂತೆ ತಿಳಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಂಚಾರ ವಿದ್ಯುನ್ಮಾನ ಮತಯಂತ್ರ ಬಳಕೆ ಪ್ರಾತ್ಯಕ್ಷಿಕೆಗೆ 20 ಮತಯಂತ್ರ ಹಾಗೂ ಕೊಠಡಿಗೆ ಒಂದು ಮತ ಯಂತ್ರಗಳನ್ನು ನೀಡಲಾಗುವುದು. ಸಂಚಾರ ಪ್ರಾತ್ಯಕ್ಷಿಕೆಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳು ಹೆಚ್ಚು ಜನ ಸೇರುವ ಸಂತೆ, ಬಸ್‌ನಿಲ್ದಾಣ, ರೈಲ್ವೆ ನಿಲ್ದಾಣಗಳನ್ನು ಆಯ್ಕೆ ಮಾಡಿ ವೇಳಪಟ್ಟಿ ಸಿದ್ಧಪಡಿಸಬೇಕು. ನಿಯೋಜಿತ ಅಧಿಕಾರಗಳು ಪ್ರತಿದಿನ ಮತಯಂತ್ರವನ್ನು ಪಡೆದು ಪ್ರಾತ್ಯಕ್ಷಿಕೆ ಮುಗಿದ ಮೇಲೆ ತಿಳಿಸಿರುವ ಸ್ಟ್ರಾಂಗ್ ರೂಂ ನಲ್ಲಿ ಡೆಪಾಸಿಟ್ ಮಾಡಬೇಕು ಎಂದು ಸೂಚಿಸಿದರು.
ಪ್ರತಿ ಮತಗಟ್ಟೆ ಹಂತದಲ್ಲಿ ಪ್ರಾತ್ಯಕ್ಷಿಕೆ ಕಾರ್ಯವನ್ನು ಕೈಗೊಳ್ಳಬೇಕು. ಪ್ರತಿ ಗ್ರಾಮದಲ್ಲಿಯೂ ಪ್ರಾತ್ಯಕ್ಷಿಕೆ ವೇಳೆ ನುರಿತ ತರಬೇತಿದಾರರು ಸಾರ್ವಜನಿಕರಿಗೆ ಮತಯಂತ್ರ ಬಳಕೆ ಕುರಿತು ಹಾಗೂ ಮತದಾನವನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ತಿಳಿಸಿಕೊಡಬೇಕು. ಇವಿಎಂ ಬಳಕೆ ಕುರಿತು ಹಿರಿಯ ನಾಗರಿಕರು, ಅಂಗವಿಕಲರು, ಯುವ ಮತದಾರರು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಕೀರ್ತನಾ, ಅಕ್ರಂ ಪಾಷ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಂಜೀವಪ್ಪ, ತಹಸೀಲ್ದಾರ್‌ಗಳಾದ ಸ್ವಾಮಿಗೌಡ, ನರಸಿಂಹಮೂರ್ತಿ, ಸೌಮ್ಯ, ಕುಂಞ ಅಹಮದ್ ಇತರರಿದ್ದರು.