ಜ.30ರಿಂದ ಸ್ಪರ್ಶ್ ಕುಷ್ಠ ಅರಿವು ಆಂದೋಲನ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾಹಿತಿ

23_01_Mdy_08(Dc Meeting)
Published on

ಮಂಡ್ಯ: ಜಿಲ್ಲೆಯಲ್ಲಿ ಜ.30 ರಿಂದ ಫೆ.13ರವರೆಗೆ ಸ್ಪರ್ಶ್ ಕುಷ್ಠ ರೋಗದ ಅರಿವು ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯಸರ್ಕಾರದ ನಿರ್ದೇಶನದಂತೆ ಈ ಅರಿವು ಕಾರ್ಯಕ್ರಮ ನಡೆಯುತ್ತಿದೆ. ಮಹಾತ್ಮ ಗಾಂಧೀಜಿ ಅವರು ಕುಷ್ಠರೋಗ ಮುಕ್ತ ಸಮಾಜವನ್ನು ನಿರ್ವಹಿಸಲು ಶ್ರಮಿಸಿದ್ದರು. ಆ ನೆನಪಿಗಾಗಿ ಗಾಂಧೀಜಿ ಅವರು ಹುತಾತ್ಮರಾದ ಜ.30 ರಂದು ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದರು.

ಆಂದೋಲನದಲ್ಲಿ ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಕರು, ಪತ್ರಿ ಮನೆ ಮನೆಗೆ, ಎಲ್ಲ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಯುವ ಜನೆತೆಗೆ ಅರಿವು ಮೂಡಿಸುತ್ತಾರೆ. ರೋಗದ ಲಕ್ಷಣಗಳಿದ್ದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ವೈದ್ಯರ ಬಳಿ ಒಮ್ಮೆ ತಪಾಸಣಾಪಡಿಸಿಕೊಳ್ಳಿ. ವ್ಯಕ್ತಿಯ ದೇಹದ ಮೇಲೆ ಯಾವುದೇ ಭಾಗದಲ್ಲಿ ತಿಳಿ ಬಿಳಿ ಅಥವಾ ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳ ರೋಗ ಲಕ್ಷಣಗಳು ಇದ್ದಲ್ಲಿ ಅವರು ಆಶಾಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಯ ಗಮನಕ್ಕೆ ತರಬೇಕು. ಅವರು ಹೆಚ್ಚಿನ ತಪಾಸಣೆಗೆ ಒಳಪಡಿಸಿ ಅದು ಕುಷ್ಠರೋಗವೊ ಇಲ್ಲವೊ ಎಂದು ಖಚಿತಪಡಿಸುತ್ತಾರೆ. ಅದು ಕುಷ್ಠರೋಗ ಆಗಿದಲ್ಲಿ ಅರೋಗ್ಯ ಇಲಾಖೆಯಿಂದ ಉಚಿತವಾಗಿ ಚಿಕಿತ್ಸೆ ಕೊಡುತ್ತಾರೆ. ಕುಷ್ಠರೋಗ ಶಾಪವಲ್ಲ, ಸೋಂಕಿತ ವ್ಯಕ್ತಿಗೆ ತಾರತಮ್ಯ ಮಾಡದೆ ಅವರಿಗೆ ಸಾಂತ್ವನ ಹೇಳಿ ಎಂದು ತಿಳಿಸಿದರು.

ಪಿ.ಬಿ ಕುಷ್ಠರೋಗ ಮತ್ತು ಎಂ.ಬಿ ಕುಷ್ಠರೋಗಗಳು ಮಂಡ್ಯದಲ್ಲಿ 21 ಪ್ರಕರಣಗಳಿವೆ. ಅವರಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತಿದೆ. ಅದನ್ನು ನಾವು ನಿರ್ಮೂಲನೆ ಮಾಡಿ ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಬೇಕು. ಅದಕ್ಕಾಗಿ ಸಾರ್ವಜನಿಕರು ಸಂಪೂರ್ಣವಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಆಡಳಿತ) ಸರಸ್ವತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕೆ.ಪಿ.ಅಶ್ವಥ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಭವಾನಿ ಶಂಕರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಜಿ.ಸಂಜಯ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಆಶಾಲತಾ, ಡಾ.ಅನಿಲ್ಕುಮಾರ್, ಡಾ.ವೀರಭದ್ರಪ್ಪ, ಡಾ.ರವೀಂದ್ರ, ಡಾ.ವೆಂಕಟೇಶ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net